ನಮ್ಮ ಜೀವನ ನಿರ್ವಹಣೆಗೆ ಮತ್ತು ನಮ್ಮನ್ನು ನಂಬಿಕೊಂಡಿರುವ ಕುಟುಂಬ ಸದಸ್ಯರ ಪಾಲನೆಗೆ ಹಣ ಸಂಪಾದನೆ ಮುಖ್ಯ. ಅನೇಕ ರಾಜಕಾರಣಿಗಳು ತಮ್ಮ ಮೂರು ತಲೆಮಾರು ಕೂತು ತಿನ್ನುವಷ್ಟು ಆಸ್ತಿಗಳನ್ನು ಮಾಡಿಡುತ್ತಾರೆ. ಇಂದು ಫೆರಾರಿ, ಬೆಂಜ್ ಕಾರುಗಳಲ್ಲಿ ಕಾಲೇಜಿಗೆ ಹೋಗುವ ಹುಡುಗರು ಕಾಣಸಿಗುತ್ತಾರೆ. ಅಪ್ಪ ಅಮ್ಮ ಮಾಡಿದ ಆಸ್ತಿಯನ್ನು ಇಟ್ಟುಕೊಂಡು ಇವರು ಶೋಕಿ ಜೀವನ ನಡೆಸುತ್ತಾರೆ. ಆಸ್ತಿ ಕರಗುವವರೆಗೂ ಐಷಾರಾಮಿಯಾಗಿ ಬದುಕುತ್ತಾರೆ, ಅದೂ ಇದೂ ವ್ಯವಹಾರ ಆರಂಭಿಸಿ ಕೈಸುಟ್ಟುಕೊಂಡು ಇದ್ದಬದ್ದ ಆಸ್ತಿ ಕರಗಿಸುವ ನಿದರ್ಶನಗಳು ಹಲವಿವೆ. ಇಂಥ ಯುವಕರಿಗೆ ಜೀವನದ ಕಷ್ಟ ಮೊದಲೇ ಗೊತ್ತಿದ್ದರೆ ಹೀಗೆ ದಾರಿ ತಪ್ಪುತ್ತಿರಲಿಲ್ಲ ಎಂದು ಹೇಳುವವರಿದ್ದಾರೆ. ಇಂಗ್ಲೆಂಡ್ನ ಶ್ರೀಮಂತ ಡೇವ್ ಫಿಶ್ವಿಕ್ (Dave Fishwick) ತನ್ನ ಶೇ. 99ರಷ್ಟು ಆಸ್ತಿಯನ್ನು ಮಕ್ಕಳಿಗೆ ಕೊಡದಿರಲು ನಿರ್ಧರಿಸಿದ್ದಾರೆ. ಅವರ ಈ ತೀರ್ಮಾನಕ್ಕೆ ಇಲ್ಲಿ ಮೇಲೆ ಹೇಳಿದ ವಿಚಾರವೇ ಕಾರಣ.
ತನ್ನ ಮಕ್ಕಳು ಕಷ್ಟಪಟ್ಟು ಕೆಲಸ ಮಾಡುವಂತೆ ಉತ್ತೇಜಿಸಲು ತಾನು ಶೇ. 99ರಷ್ಟು ಆಸ್ತಿಯನ್ನು ದಾನವಾಗಿ ಕೊಡಲು ನಿರ್ಧರಿಸಿರುವುದಾಗಿ ಡೇವ್ ಫಿಶ್ವಿಕ್ ಹೇಳಿದ್ದಾರೆ.
ನೆಟ್ಫ್ಲಿಕ್ಸ್ ಹೀರೋ
ಡೇವ್ ಫಿಶ್ವಿಕ್ ಬಹಳ ಶ್ರಮ ಪಟ್ಟು ದೊಡ್ಡ ಹಂತಕ್ಕೆ ಬೆಳೆದಿದ್ದಾರೆ. ಇವರ ಜೀವನಗಾಥೆ ನೆಟ್ಫ್ಲಿಕ್ಸ್ನಲ್ಲಿ ಚಿತ್ರವಾಗಿ ನಿರ್ಮಾಣವಾಗಿದೆ. ಟಿವಿ ಕೊಳ್ಳಲು ಹಣವಿಲ್ಲದ ಪರಿಸ್ಥಿತಿಯಲ್ಲಿ ಇದ್ದ ಇವರು ಈಗ ನೆಟ್ ಫ್ಲಿಕ್ಸ್ಗೆ ಶೂಟ್ ಮಾಡಲು ಐಷಾರಾಮಿ ಫೆರಾರಿ ಕಾರಿನಲ್ಲಿ ಆಗಮಿಸಿ ಎಲ್ಲರನ್ನೂ ದಂಗುಬಡಿಸಿದ್ದರು. 2008ರ ಆರ್ಥಿಕ ಹಿಂಜರಿತದ ವೇಳೆ ಇವರು ತಮ್ಮದೇ ಬ್ಯಾಂಕ್ ಕಟ್ಟಿ ಖ್ಯಾತಿ ಪಡೆದಿದ್ದರು.
ಬಡಸ್ತನವನ್ನು ಗಾಢವಾಗಿ ಅನುಭವಿಸಿದ್ದ ಡೇವ್ ಫಿಶ್ವಿಕ್ ಯಾಕೆ ತನ್ನ ಮಕ್ಕಳಿಗೆ ಸುಖದ ಜೀವನ ಕೊಡಲು ಮುಂದಾಗಿಲ್ಲ ಎಂದು ಅನಿಸಬಹುದು. ಡೇವ್ ತಮ್ಮ ಮಕ್ಕಳಿಗೆ ಕಷ್ಟದ ಜೀವನ ಕೊಡುತ್ತಿಲ್ಲ. ಆದರೆ, ಕಷ್ಟಪಟ್ಟು ಸಂಪಾದನೆ ಮಾಡಬೇಕೆಂಬ ಮನೋಭಾವವನ್ನು ಬಿತ್ತುವ ಸಲುವಾಗಿ ತಮ್ಮ ಆಸ್ತಿಯ ಬಹುಪಾಲನ್ನು ದಾನವಾಗಿ ಕೊಡಲು ನಿರ್ಧರಿಸಿದ್ದಾರಂತೆ.
Just been up in the clouds to clear my mind, what an incredible week it has been!#BankofDave @NetflixUKhttps://t.co/8p6QrB0fTH pic.twitter.com/ocCM4QmEm0
— Bank on Dave (@FishwickDavid) January 22, 2023
ನಾನು ಜೀವನದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಒಮ್ಮೆಗೇ ಮೂರು ಉದ್ಯೋಗಗಳನ್ನು ಮಾಡಿದ್ದೇನೆ. ನನ್ನ ರೀತಿಯಲ್ಲೇ ಮಕ್ಕಳೂ ಶ್ರಮದಿಂದ ಕೆಲಸ ಮಾಡಬೇಕು ಎಂದು ಈ ಇಂಗ್ಲೆಂಡ್ ಉದ್ಯಮಿ ಹೇಳುತ್ತಾರೆ.
ಮಕ್ಕಳು ಕಷ್ಟಪಟ್ಟು ಕೆಲಸ ಮಾಡುವುದು ಮುಖ್ಯ ಎಂಬುದು ನನ್ನ ಭಾವನೆ. ಬಹಳ ಜನ ಹಣಸಂಪಾದನೆಯಲ್ಲಿ ಯಶಸ್ವಿಯಾಗಿ ಶ್ರೀಮಂತರಾಗಿದ್ದನ್ನು ನೋಡಿದ್ದೇನೆ. ಆದರೆ ಅವರ ಮಕ್ಕಳಿಗೆ ಹಣದ ಬೆಲೆ ಗೊತ್ತಿಲ್ಲದೇ ಹಾಳಾಗಿರುವುದನ್ನೂ ನೋಡಿದ್ದೇನೆ. ಕಷ್ಟಪಡುವವರನ್ನು ಅದೃಷ್ಟವೂ ಹುಡುಗಿಕೊಂಡು ಬರುತ್ತದೆ ಎನ್ನುತ್ತಾರೆ. ನನ್ನ ಎಲ್ಲಾ ಮಾತನ್ನೂ ಮಕ್ಕಳು ಒಪ್ಪುವುದಿಲ್ಲ. ಆದರೂ ನನ್ನ ಮಕ್ಕಳು ಒಳ್ಳೆಯವರೇ ಎಂದು ಡೇವ್ ಫಿಶ್ವಿಕ್ ಹೇಳುತ್ತಾರೆಂದು ಡೈಲಿ ಸ್ಟಾರ್ ಜಾಲತಾಣ ವರದಿ ಮಾಡಿದೆ.
Published On - 1:40 pm, Tue, 31 January 23