
Viral Video : ಕಲಿಕೆಗೆ ಯಾವ ವಯಸ್ಸು? ಆದರೆ ಸಾಹಸಕ್ಕೆ!? ಅದಕ್ಕೂ ಇಲ್ಲ ಅನ್ನುತ್ತಿದ್ದಾನೆ ಈ ಅಜ್ಜ. ಹೀಗೆ ಈ ಮೋಡಮುಸುಕಿದ ವಾತಾವರಣದಲ್ಲಿ ಜಿಬುರು ಮಳೆಯಲ್ಲಿ ಈ ಅಜ್ಜ ಮುಖ್ಯರಸ್ತೆಯಲ್ಲಿ ಅತಿವೇಗದಲ್ಲಿ ಸೈಕಲ್ ಮೇಲೆ ಸ್ಟಂಟ್ ಮಾಡಿಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ನೋಡಿದ ಯಾರಿಗೂ ಅಲಾ ಅಜ್ಜನೇ! ಎನ್ನಿಸದೇ ಇರಲು. ನೀವೀಗ ಚಳಿಯಲ್ಲಿ ಮುದುರಿಕೊಂಡು ಕಾಫಿಗಾಗಿ ಧ್ಯಾನಿಸುತ್ತ ಕುಳಿತಿರಬಹುದು. ಆದರೆ ಈ ಅಜ್ಜನ ವಿಡಿಯೋ ನೋಡುತ್ತಿದ್ದಂತೆ ಸೈಕಲ್ ಏರಬೇಕೆಂದು ಮನಸ್ಸಾದರೂ ಆದೀತು.
ಮಳೆಯಲ್ಲಿ ಓಡಾಡುವುದೇ ಕಷ್ಟವೆಂದು ಮುದುರಿ ಕುಳಿತುಕೊಳ್ಳುವ ಜನ ನಾವು. ಅದರಲ್ಲೂ ಸೈಕಲ್ ಮೇಲೆ! ಆದರೆ ಈ ಅಜ್ಜನ ಉತ್ಸಾಹ ನೋಡಿ, ತನ್ನಪಾಡಿಗೆ ತಾ ಹೇಗೆ ಗಾಳಿಯಲ್ಲಿ ತೇಲುತ್ತಿದ್ದಾನೆಂದು. ಈ ವಯಸ್ಸಿನಲ್ಲಿಯೇ ಇಷ್ಟೊಂದು ಸಾಹಸ ಇನ್ನು ವಯಸ್ಸಿದ್ದಾಗ ಏನೆಲ್ಲ ಸಾಹಸ ಮಾಡಿರಬಹುದು ಎನ್ನುವ ಅನುಮಾನ ಏಳದೆ ಇರುತ್ತದೆಯೇ?
ಹೀಗೆ ಸೈಕಲ್ ಮೇಲೆ ಮೈಮರೆತು ಹೋಗುತ್ತಿರುವಾಗ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ. ಯಾವ ಊರು ಏನು ಹೆಸರು ಏನೊಂದೂ ಗೊತ್ತಿಲ್ಲ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 85,000 ಜನ ನೋಡಿದ್ದಾರೆ. ಇವನೇ ನಿಜವಾದ ಶ್ರೀಮಂತ, ಏಕೆಂದರೆ ಇಷ್ಟೊಂದು ಆಯಸ್ಸು, ಆರೋಗ್ಯವನ್ನು ಪಡೆದುಕೊಂಡು ಉತ್ಸಾಹವನ್ನೂ ಉಳಿಸಿಕೊಂಡಿದ್ದಾನೆ ಎಂದಿದ್ದಾರೆ ಒಬ್ಬರು. ಜೀವನವನ್ನು ಹೀಗೆ ಸಂತೋಷದಿಂದ ಅನುಭವಿಸಬೇಕು ಎಂದಿದ್ದಾರೆ ಇನ್ನೊಬ್ಬರು. ಅಳುವುದಕ್ಕೆ, ಕೊರಗುವುದಕ್ಕೆ ಸಮಯವಿಲ್ಲ ಎನ್ನುವ ಹಾಗೆ ಹೀಗೆ ಬದುಕನ್ನು ಎದುರುಗೊಳ್ಳಬೇಕು ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ