ಸಾಮಾನ್ಯವಾಗಿ ಅನಾರೋಗ್ಯದ ಸಮಸ್ಯೆಯಿದ್ದಾಗ ರಾತ್ರಿ ನಿದ್ರೆಯೇ ಬರುವುದಿಲ್ಲ ಎಂಬುದು ಹಲವರ ಚಿಂತೆ. ನಿದ್ದೆ ಮಾಡಲು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಅತಿಯಾದ ನಿದ್ರೆಯೇ ಇಲ್ಲೋರ್ವರಿಗೆ ಖಾಯಿಲೆಯಾಗಿದೆ. ರಾಜಸ್ಥಾನದ ( Rajasthan) ಜೋಧ್ ಪುರದ ನಾಗೌರ್ನ ವ್ಯಕ್ತಿ ಸರಿಸುಮಾರು ವರ್ಷದ 300 ದಿನ ನಿದ್ದೆಗೆ ಜಾರುತ್ತಾರಂತೆ. ವಿಷಯ ಕೇಳಿದಾಕ್ಷಣ ವಿಚಿತ್ರ ಅನ್ನಿಸುತ್ತಿರಬಹುದು. ಆದರೆ ಅವರಿಗೆ ಆಕ್ಸಿಸ್ ಹೈಪರ್ಸೋಮ್ನಿಯಾ(axis hypersomnia) ಎಂಬ ಖಾಯಿಲೆ ಇದೆ. ಅದು ಮಾನಸಿಕ ಸ್ಥಿತಿಯ(Mental Health) ಮೇಲೆ ಪರಿಣಾಮ ಬೀರುವಂತದ್ದು. ಈ ವ್ಯಕ್ತಿಯು ಅಪರೂಪದಲ್ಲಿ ಅಪರೂಪದ ಖಾಯಿಲೆಗೆ ತುತ್ತಾಗಿರುವುದರಿಂದ ಹೆಚ್ಚು ದಿನ ನಿದ್ರೆಯಲ್ಲಿಯೇ ಇರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತಂತೆ ವರದಿಯಿಂದ ಮಾಹಿತಿ ಲಭ್ಯವಾಗಿದೆ.
ಇವರ ಹೆಸರು ಪುರ್ಖಾರಾಮ್. ಇವರಿಗೆ 42 ವರ್ಷ ವಯಸ್ಸು. ತಮ್ಮ 23 ವಯಸ್ಸಿನಲ್ಲಿ ಅವರಿಗೆ ಆಕ್ಸಿಸ್ ಹೈಪರ್ಸೋಮ್ನಿಯಾ ಖಾಯಿಲೆ ತಗಲುತ್ತದೆ. ಇದರಿಂದ ಅವರು ಹೆಚ್ಚು ನಿದ್ರೆಗೆ ಜಾರುತ್ತಾ ಹೋಗುತ್ತಾರೆ. ಒಂದು ಬಾರಿ ನಿದ್ರೆಗೆ ಜಾರಿದರೆ ಅವರು 25 ದಿನಗಳ ಕಾಲ ನಿದ್ರೆ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಊರಿನವರು ಪುರ್ಖಾರಾಮ್ರನ್ನು ಕುಂಭಕರ್ಣ ಎಂದು ಕರೆಯುತ್ತಾರೆ.
ಇವರು ಭದ್ವಾ ಗ್ರಾಮದ ನಿವಾಸಿ. ಕಿರಾಣಿ ಅಂಗಡಿಯನ್ನು ನಡೆಸುತ್ತಾರೆ. ಆದರೆ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವುದರಿಂದ ವರ್ಷದಲ್ಲಿ 5 ದಿನ ಮಾತ್ರ ತನ್ನ ಅಂಗಡಿಯನ್ನು ತೆರೆಯಲು ಅವಕಾಶ ಲಭಿಸುತ್ತದೆ. ಈ ರೋಗ ಲಗುಲಿದ ಪ್ರಾರಂಭದಲ್ಲಿ ಪುರ್ಖಾರಾಮ್ ಅವರು 5ರಿಂದ 7 ದಿನಗಳವರೆಗೆ ನಿದ್ರೆ ಮಾಡುತ್ತಿದ್ದರು. ಆರಂಭದಲ್ಲಿ ಕುಟುಂಬದ ಸದಸ್ಯರು ಅವರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದರು. ನಿದ್ದೆಯ ಮಂಪರಿನಲ್ಲಿಯೇ ಇರುತ್ತಿದ್ದರು. ಆದರೆ ಖಾಯಿಲೆಯ ತೀವ್ರ ಪರಿಣಾಮದಿಂದ 20ರಿಂದ 25 ದಿನಗಳ ಕಾಲ ಎಚ್ಚರಗೊಳ್ಳುವುದಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
2015ರಿಂದ ಈ ಖಾಯಿಲೆ ತೀವ್ರವಾಯಿತು
ಪುರ್ಖಾರಾಮ್ ನಿದ್ರಿಸುವ ಸಮಯವನ್ನು ನೋಡಿದ ಮನೆಯವರು ಭಯಗೊಂಡು ವೈದ್ಯರಲ್ಲಿ ಕರೆದೊಯ್ದಿದ್ದಾರೆ. ಆದರೆ ಆರಂಭದಲ್ಲಿ ವೈದ್ಯರು ಈ ರೋಗವನ್ನು ಗಮನಿಸಿರಲಿಲ್ಲ. ದಿನ ಕಳೆದಂತೆ ಪುರ್ಖಾರಾಮ್ ಅವರ ನಿದ್ರೆಯ ಅವಧಿ ಹೆಚ್ಚಾಗುತ್ತಾ ಸಾಗಿತು. ಆಗಾಗ 25 ದಿನಗಳವರೆಗೆ ನಿದ್ರಿಸಲು ಪ್ರಾರಂಭಿಸಿದರು. ಈ ರೋಗ ತಗಲುವುದು ಬಹಳ ವಿರಳ. ಅಪರೂಪದಲ್ಲಿ ಅಪರೂಪದ ಕಾಯಿಲೆ ಎಂದು ವೈದ್ಯರು ಹೇಳಿದ್ದಾರೆ. 2015ರಿಂದ ಪುರ್ಖಾರಾಮ್ ಅವರ ನಿದ್ರೆಯ ಸಮಯ ಹೆಚ್ಚಾಯಿತು. 18 ದಿನಗಳ ಕಾಲ ನಿದ್ರೆ ಮಾಡುತ್ತಿದ್ದರು. ಆದರೆ ಇದೀಗ 20 ರಿಂದ 25 ದಿನಗಳವರೆಗೆ ನಿದ್ರೆ ಮಾಡುತ್ತಾರೆ.
ನಿದ್ರೆಗೆ ಜಾರುವ ಒಂದು ದಿನದ ಮೊದಲು ಆಹಾರ
ನಿದ್ರೆಗೆ ಜಾರುವ ಒಂದು ದಿನದ ಮೊದಲು ಪುರ್ಖಾರಾಮ್ ಅವರು ತಲೆನೋವಿನಿಂದ ಬಳಲುತ್ತಾರೆ. ಒಮ್ಮೆ ನಿದ್ರೆಗೆ ಜಾರಿದರೆ ಅವರು ಎಚ್ಚರಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪೂರ್ಖಾರಾಮ್ ಅವರು ನಿದ್ದೆ ಮಾಡುವಾಗ ಅವರ ಸಂಬಂಧಿಕರು ಊಟ ಮಾಡಿಸುತ್ತಾರೆ. ಅವರ ಅನಾರೋಗ್ಯಕ್ಕೆ ಇನ್ನೂ ಚಿಕಿತ್ಸೆ ಸಿಕ್ಕಿಲ್ಲ. ಮೊದಲಿನಂತೆಯೇ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಅವರ ತಾಯಿ ಕನ್ವಾರಿ ದೇವಿ ಮತ್ತು ಪತ್ನಿ ಲಚ್ಮಿ ದೇವಿ ವಿಶ್ವಾಸದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:
ಟೀ ಎಸ್ಟೇಟ್ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ; ವಿಡಿಯೋ ವೈರಲ್
ಕಡಿಮೆ ನಿದ್ರೆ ಅಂದರೆ ಹಲವು ತೊಂದರೆ; ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
Published On - 1:36 pm, Tue, 13 July 21