ಅಂಗುಲ್: ಅನಾರೋಗ್ಯವೆಂದು ಆಸ್ಪತ್ರೆಗೆ ಬಂದ ರೋಗಿಗೆ ಆ ಹಾಸ್ಪಿಟಲ್ನ ಸೆಕ್ಯೂರಿಟಿ ಗಾರ್ಡ್ ಇಂಜೆಕ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈ ಘಟನೆ ನಡೆದದ್ದು ಓಡಿಶಾದ ಅಂಗುಲ್ ಜಿಲ್ಲಾ ಪ್ರಧಾನ ಆಸ್ಪತ್ರೆಯಲ್ಲಿ. ಅಲ್ಲಿ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಇದ್ದಾಗ್ಯೂ ಕೂಡ ಸೆಕ್ಯೂರಿಟಿ ಗಾರ್ಡ್ ಇಂಜೆಕ್ಷನ್ ನೀಡಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಥಳೀಯ ಮಾಧ್ಯಮವೊಂದು ಆಸ್ಪತ್ರೆಯ ಎಡಿಎಂಒ ಮಾನಸ್ ರಂಜನ್ ಬಿಸ್ವಾಲ್ ಅವರನ್ನು ಮಾತನಾಡಿಸಿದೆ. ಹೀಗೆ ಸೆಕ್ಯೂರಿಟಿ ಗಾರ್ಡ್ ಇಂಜೆಕ್ಷನ್ ನೀಡಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾಕೆ ಹೀಗಾಯಿತು ಎಂದು ಪರಿಶೀಲಿಸಿ, ಸಂಬಂಧಪಟ್ಟವರ ವಿರುದ್ಧ ತನಿಖೆ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಆದರೆ ವಿಡಿಯೋ ನೋಡಿದವರು ಮಾತ್ರ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೊ ದೊಡ್ಡ ಆಸ್ಪತ್ರೆ. ಅಲ್ಲಿ ಇರುವುದು ಒಬ್ಬರೇ ವೈದ್ಯರೂ ಅಲ್ಲ. ಬೇರೆ ವೈದ್ಯರಿದ್ದಾರೆ. ನರ್ಸ್ಗಳಿರುತ್ತಾರೆ. ಪ್ಯಾರಾ ಮೆಡಿಕಲ್ ಸಿಬ್ಬಂದಿಯೂ ಇದ್ದಾರೆ. ಅಷ್ಟೆಲ್ಲ ಆದರೂ ಸೆಕ್ಯೂರಿಟಿ ಗಾರ್ಡ್ ಇಂಜೆಕ್ಷನ್ ನೀಡುವ ಸಂದರ್ಭ ಎದುರಾಗಲು ಕಾರಣವಾದರೂ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಮಧ್ಯೆ ಆಗಸ್ಟ್ 29ರಂದು ಒಡಿಶಾ ಸರ್ಕಾರ ಒಂದು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ, ವೈದ್ಯಕೀಯ ವೃತ್ತಿಗೆ ಸಂಬಂಧಿತವಲ್ಲದ ಸಿಬ್ಬಂದಿಯನ್ನು , ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: Motorola: ಮೋಟೋರೊಲಾ ಕಂಪೆನಿಂದ ಹೊಸ ಏರ್ ಚಾರ್ಜರ್: ಇದರಲ್ಲಿದೆ ನೀವು ಊಹಿಸಲಾಗದ ಫೀಚರ್ಸ್