ಒಂದು ಕೆಜಿ ಮಾವಿನ ಹಣ್ಣಿಗೆ ನೀವು ಎಷ್ಟು ರೂಪಾಯಿ ಕೊಟ್ಟೀರುತ್ತೀರಾ? ಹೆಚ್ಚೂ ಅಂದ್ರೂ 200-250 ರೂಪಾಯಿಯ ಒಳಗಿರಬಹುದು ಅಲ್ವೇ. ಆದರೆ ವಿಶ್ವದಲ್ಲೇ ಅತಿ ದುಬಾರಿ ರಸಭರಿತ ಮಾವಿ ಹಣ್ಣು ಯಾವುದು ಎಂದು ತಿಳಿದು ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ ಅಲ್ವೇ? ಅಪರೂಪದಲ್ಲಿ ಅಪರೂಪ ಈ ಮಾವಿನ ಹಣ್ಣು.. ಅತಿ ದುಬಾರಿ ಬೆಲೆ.. ಜತೆಗೆ ಬಣ್ಣವೂ ವಿಭಿನ್ನ! ಹೀಗಿರುವಾಗ ಮಾವಿನ ಹಣ್ಣಿನ ಪ್ರಿಯರಿಗೆ ಕೊಳ್ಳುವ ಆಸೆ ಹುಟ್ಟಿರಬೇಕಲ್ವೇ? ಕೆಜಿ ಮಾವಿನ ಹಣ್ಣಿನ ಬೆಲೆ ಕೇಳಿ, ಆಮೇಲೆ ಯೋಚಿಸಬಹುದು ಖರೀದಿಸುವುದರ ಕುರಿತು..
ಅಪರೂಪದಲ್ಲಿ ಅಪರೂಪದ ಮಾವಿನ ಹಣ್ಣಿಗೆ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿಯಂತೆ. ಆಶ್ಚರ್ಯವಾಗುತ್ತಿದ್ರೂ ನಂಬಲೇಬೇಕಾದ ಸತ್ಯ. ಹಣ್ಣನ್ನು ಬೆಳೆದ ದಂಪತಿ ಆಭರಣಗಳನ್ನು ರಕ್ಷಿಸಿದಷ್ಟೇ ಜಾಗರೂಕತೆಯಿಂದ ರಕ್ಷಿಸುತ್ತಿದ್ದಾರೆ. ವಿಶ್ವದಲ್ಲಿಯೇ ಅತಿ ದುಬಾರಿ ಹಣ್ಣನ್ನು ಬೆಳೆದ ದಂಪತಿ ಯಾರು? ಎಂಬ ಕುತೂಹಲ ಕೆರಳಿರಬೇಕಲ್ಲವೇ..
ಈ ಹಣ್ಣು ಜಪಾನ್ನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದರ ಹೆಸರು ಮಿಯಾಜಾಕಿ ಮಾವಿನ ಹಣ್ಣು. ಸಾಮಾನ್ಯವಾಗಿ ಮಾವಿನ ಹಣ್ಣುಗಳು ಹಳದಿ ಬಣ್ಣದಲ್ಲಿದ್ದರೆ ಈ ಅಪರೂಪದ ಮಾವಿನ ಹಣ್ಣು ಕಡುಗೆಂಪು ಬಣ್ಣದಲ್ಲಿದೆ. ಜಪಾನೀಸ್ ಮಾವಿನ ತಳಿಯನ್ನು ಮಧ್ಯಪ್ರದೇಶದ ದಂಪತಿ ಬೆಳೆದಿದ್ದಾರೆ. ಬೆಳೆದ ಹಣ್ಣಿನ ಕಾವಲಿಗೆ 6 ನಾಯಿಗಳನ್ನು ಹಾಗೂ 4 ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಿಟ್ಟಿದ್ದಾರೆ.
ಮಧ್ಯಪ್ರದೇಶದ ದಂಪತಿ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ಓರ್ವ ವ್ಯಕ್ತಿ ಅವರಿಗಾಗಿ ಒಂದಿಷ್ಟು ಮಾವಿನ ಸಸಿಗಳನ್ನು ನೀಡಿದ್ದರು. ಇದನ್ನು ಮನೆಗೆ ತಂದ ದಂಪತಿ ತಮ್ಮ ತೋಟದಲ್ಲಿ ಸಸಿಯನ್ನು ಚೆನ್ನಾಗಿ ಬೆಳೆಸಿದ್ದಾರೆ. ಸಾಮಾನ್ಯವಾಗಿ ಮಾವಿನ ಹಣ್ಣು ಹಳದಿ ಬಣ್ಣದಲ್ಲಿ ಕಾಣ ಸಿಗುತ್ತದೆ. ಆದರೆ ಈ ಹಣ್ಣು ಕಡುಗೆಂಪು ಬಣ್ಣದಲ್ಲಿ ಕಂಡು ಆಶ್ಚರ್ಯವಾಗಿದೆ ಅವರಿಗೆ. ಈ ಕುರಿತಂತೆ ಅವರು ಸಂಶೋಧನೆಗೆ ಮುಂದಾಗಿದ್ದಾರೆ. ಹಣ್ಣಿನ ಕುರಿತಾಗಿ ತಿಳಿಯುತ್ತಿದ್ದಂತೆಯೇ ಅದರ ಮಹತ್ವ ತಿಳಿದ ದಂಪತಿ ಭಾರೀ ಸಂತೋಷಗೊಂಡಿದ್ದಾರೆ.
ಜಪಾನೀಸ್ ಮಿಯಾಜಕಿ ಮಾವಿನ ಹಣ್ಣು ವಿಶ್ವದಲ್ಲಿಯೇ ಅತಿ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಹಣ್ಣು ಕಳೆದ ವರ್ಷ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿ ಇತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ.
ಕಳೆದ ವರ್ಷ ಕಳ್ಳರು ದಂಪತಿ ತೋಟಕ್ಕೆ ನುಗ್ಗಿ ದುಬಾರಿ ಹಣ್ಣನ್ನು ಕದ್ದು ಹೋಗಿದ್ದಾರೆ. ಹಾಗಾಗಿ ಈ ವರ್ಷ ಮಾವಿನ ಹಣ್ಣನ್ನು ಕಳ್ಳರಿಂದ ಕಾಪಾಡಿಕೊಳ್ಳಲು 6 ನಾಯಿಗಳನ್ನು, 4 ಕಾವಲುಗಾರರನ್ನು ನಿಯೋಜಿಸಲಾಗಿದೆ. ಮತ್ತು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಫಸಲು ಬಿಡುವಂತೆ ತೋಟವನ್ನು ರಕ್ಷಿಸಿದ್ದಾರೆ. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದ ಸಮೃದ್ಧಿಯಾಗಿರುವ ವಿಶೇಷ ಹಣ್ಣು ಇದಾಗಿದೆ. ದೃಷ್ಟಿಹೀನತೆಯನ್ನು ಸುಧಾರಿಸುವ ಶಕ್ತಿ ಇದರಲ್ಲಿದೆ. ಈ ಅಪರೂಪದ ಹಣ್ಣನ್ನು ಜಪಾನಿನಲ್ಲಿ ಮೊದಲು ಬೆಳೆದವರು ಮಿಯಾಜಾಕಿ ನಗರದವರು.
ಇದನ್ನೂ ಓದಿ:
ಹಾವೇರಿ: ಹೊಟ್ಟೆ ಪಾಡಿಗೆ ಮಾವಿನ ಹಣ್ಣು ವ್ಯಾಪಾರ, ಉದ್ಯೋಗ ಖಾತ್ರಿಯತ್ತ ಮುಖ ಮಾಡಿದ ಅತಿಥಿ ಉಪನ್ಯಾಸಕರು
ಅತಿ ಹೆಚ್ಚು ತೂಕದ ಮಾವಿನ ಹಣ್ಣು ಬೆಳೆದು ವಿಶ್ವ ದಾಖಲೆಗೆ ಹೆಸರಾದ ಕೊಲಂಬಿಯಾ ರೈತರು
Published On - 11:34 am, Fri, 18 June 21