ವಯಸ್ಸಿನ ಬಗ್ಗೆ ಕೆಲವರು ಅದೊಂದು ನಂಬರ್ ಮಾತ್ರ ಅಂತ ಹೇಳುವುದನ್ನು ನೀವು ಕೇಳಿಸಿಕೊಂಡಿರಬಹುದು. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವ ಜನಕ್ಕೆ ವಯಸ್ಸು ನಿಜಕ್ಕೂ ಒಂದು ಸಂಖ್ಯೆ ಮಾತ್ರವೇ. ಸೋನಿ ಚ್ಯಾನೆಲ್ನಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡೋಲ್’ ರಿಯಾಲಿಟಿ ಶೋನ ರವಿವಾರದ ಎಪಿಸೋಡ್ ಸೀನಿಯರ್ ಸಿಟಿಜನ್ಗಳಿಗೆ ಮೀಸಲಾಗಿತ್ತು. ಹಿರಿಯ ನಾಗರಿಕರ ಕೋರಿಕೆಯ ಹಾಡನ್ನು ಕಾಂಟೆಸ್ಟಂಟ್ಗಳು ಹಾಡಿದರು. ಆ ಹಿರಿಯ ನಾಗರಿಕರ ಪೈಕಿ ಒಬ್ಬರು 62-ವರ್ಷ ವಯಸ್ಸಿನ ಮಾಡೆಲ್ ಇದ್ದರು. ವಿಶೇಷ ಅವರು ಮಾಡೆಲ್ ಆಗಿರುವುದಲ್ಲ. ಅದರೆ, ಆ ವೃತ್ತಿಯನ್ನು ಅವರು ಯಾವಾಗ ಆರಂಭಿಸಿದರರೆನ್ನವುದು. ನೀವು ನಂಬಲಾರಿರಿ, ಕೇವಲ 5 ವರ್ಷಗಳ ಹಿಂದೆ ಅವರು ಮಾಡೆಲಿಂಗ್ ವೃತ್ತಿಯನ್ನು ಆರಂಭಿಸಿದರು, ಅಂದರೆ ತಮ್ಮ 57 ನೇ ವಯಸ್ಸಿನಲ್ಲಿ. ಅದಕ್ಕೂ ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ಅವರು ತಮ್ಮ ಸ್ಥೂಲಕಾಯದಿಂದಾಗಿ ಒಂದು ವರ್ಷದವರೆಗೆ ನಡೆದಾಡಿರಲೇ ಇಲ್ಲ! ಹೌದು ಒಂದು ವರ್ಷ ಅವರು ಹಾಸಿಗೆ ಮೇಲೆಯೇ ಬಿದ್ದುಕೊಂಡಿರುತ್ತಿದ್ದರಂತೆ. ತಮ್ಮ ತೂಕವನ್ನು 125 ಕೆಜಿಗಳಿಂದ 74ಕ್ಕೆ ಇಳಿಸಿಕೊಂಡಿರುವ ಅವರು ಈಗ ಹಲವಾರು ಬ್ರ್ಯಾಂಡ್ಗಳನ್ನು ಎಂಡಾರ್ಸ್ ಮಾಡುತ್ತಿದ್ದಾರೆ.
ಅವರನ್ನು ಇಲ್ಲಿ ನೆನಪಿಸಿಕೊಳ್ಳುವ ಪ್ರಮೇಯವನ್ನು ಟೊರೊಂಟೋದಲ್ಲಿ ನೆಲೆಸಿರುವ ಒಬ್ಬ ಭಾರತೀಯ ಮಹಿಳೆ ಸೃಷ್ಟಿಸಿದ್ದಾರೆ. 46 ವಯಸ್ಸಿನ ಈ ಆಂಟಿಯ ಹೆಸರು ಓರ್ಬೀ ರಾಯ್. ಆವರನ್ನು ಆಂಟಿ ಎಂದು ಕರೆಯುವ ಧಾರ್ಷ್ಟ್ಯತೆ ನಾವು ಪ್ರದರ್ಶಿಸುತ್ತಿಲ್ಲ, ಖುದ್ದು ಅವರೇ ತಮ್ಮನ್ನು ಆಂಟಿ ಎಂದು ಕರೆದುಕೊಳ್ಳುತ್ತಾರೆ. ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ಹೆಸರೇ ‘ಆಂಟಿ ಸ್ಕೇಟ್ಸ್’. ವಯಸ್ಸಿಗೆ ಸಂಬಂಧಿಸಿದ ಎಲ್ಲ ಇಸಮ್ಮುಗಳನ್ನು ಅವರು ತೊಡೆದು ಹಾಕುತ್ತಿದ್ದಾರೆ. ಯಾವುದೇ ಕೆಲಸ ಮಾಡಲು ವಯಸ್ಸು ಅಡ್ಡಿಯಾಗದು ಎನ್ನುವುದನ್ನು ಅವರು ತಮ್ಮ ಹವ್ಯಾಸವನ್ನೇ ನಿದರ್ಶನವಾಗಿಟ್ಟು ಸಾಬೀತು ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಪ್ರೊಫೈಲ್ ಹೇಳುವ ಹಾಗೆ ಓರ್ಬೀ ಅವರಿಗೆ ಸ್ಕೇಟಿಂಗ್ ಮಾಡುವುದು ಹವ್ಯಾಸ ಮತ್ತು ವ್ಯಾಮೋಹವೂ ಹೌದು. ಆದರೆ, ಕೆನಡಾ ಅಥವಾ ಬೇರೆ ಯಾವುದೇ ದೇಶದಲ್ಲಿ ಸ್ಕೇಟ್ ಮಾಡಬೇಕಾದರೆ ಅದಕ್ಕೆ ತಕ್ಕದಾದ ಉಡುಪು ಬೇಕಾಗುತ್ತದೆ. ಪ್ಯಾಂಟ್, ಟ್ರ್ಯಾಕ್ ಸೂಟ್ ಅಥವಾ ನಿಕ್ಕರ್ ಮುಂತಾದ ಉಡುಪುಗಳು ಸ್ಕೇಟಿಂಗ್ ಮಾಡುವುದಕ್ಕೆ ಸರಿ. ಆದರೆ ಓರ್ಬೀ ಅವರು ಸೀರೆಯಲ್ಲಿ ಸ್ಕೇಟ್ ಮಾಡುತ್ತಾರೆ! ಸೀರೆಯುಟ್ಟು ಸ್ಕೇಟ್ ಮಾಡುತ್ತಿರುವ ಅವರು ಪೋಸ್ಟ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
ಅವರ ಇತ್ತೀಚಿನ ವಿಡಿಯೋದ ಒಕ್ಕಣೆ ಹೀಗಿದೆ: ‘46 ವರ್ಷ ವಯಸ್ಸಿನ ಆಂಟಿ ಸೀರೆಯುಟ್ಟು ಸ್ಕೇಟ್ ಮಾಡುತ್ತಾ ಸಂತೋಷ ಮತ್ತು ಪಾಸಿಟಿವಿಟಿಯನ್ನು ಹಂಚುತ್ತಿದ್ದಾಳೆ, ಬದುಕಿನಲ್ಲಿ ಯಾವುದೂ ತಡವಲ್ಲ’
ಸಾಮಾಜಿಕ ಜಾಲತಾಣಗಳಲ್ಲಿ ಓರ್ಬೀ ಅವರ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅವರ ಅರ್ಧದಷ್ಟು ವಯಸ್ಸಿನ ಜನರಲ್ಲಿ ಕೀಳರಿಮೆ ಹುಟ್ಟುಸುತ್ತಿವೆ.
ಮತ್ತೊಂದೂ ವಿಡಿಯೋದಲ್ಲಿ ಅವರು ನೇರಳೆ ಬಣ್ಣದ ಸೀರೆಯುಟ್ಟು ಸ್ಕೇಟ್ಬೋರ್ಡ್ ಮೇಲೆ ಅಚ್ಚರಿ ಮೂಡಿಸುವ ಸ್ಕೇಟಿಂಗ್ ಸ್ಕಿಲ್ಗಳನ್ನು ಪ್ರದರ್ಶಿಸುತ್ತಿದ್ದಾರೆ. ನೆಟ್ಟಿಗರು ಅವರ ದೈರ್ಯವನ್ನು ಮೆಚ್ಚಿ ಕಾಮೆಂಟ್ ಮಾಡುತ್ತಲೇ ಇದ್ದಾರೆ. ಈ ವಿಡಿಯೋದಲ್ಲಿ ಅವರ ಒಕ್ಕಣೆ ಕೊಂಚ ಭಿನ್ನವಾಗಿದೆ. ‘ಆಂಟಿ ಸ್ಕೇಟ್ಸ್’ ಎಂದು ಆರಂಭಿಸುವ ಅವರು, ‘ 46ನೇ ವಯಸ್ಸಿನಲ್ಲಿ ಈ ಆಂಟಿ, ತನ್ನ ಬದುಕಿನ ಅತ್ಯುತ್ತಮ ಘಟ್ಟವನ್ನು ಜೀವಿಸುತ್ತಿದ್ದಾಳೆ, ಬದುಕಿನಲ್ಲಿ ಯಾವುದಕ್ಕೂ ಕಾಲಮಿತಿ ಎನ್ನುವುದು ಇರೋದಿಲ್ಲ,’ ಎಂದು ಹೇಳುತ್ತಾರೆ.
ವಿಡಿಯೋವನ್ನು ನೋಡಿದ ನೆಟ್ಟಿಗರು, ‘ಅದ್ಭುತ,’ ‘ಎಲ್ಲರಿಗೂ ಪ್ರೇರಣೆದಾಯಕ,’ ‘ನಮಗೆ ನೀವೇ ಸ್ಫೂರ್ತಿ’. ‘ನಿಮ್ಮ ಧೈರ್ಯ ಸಾಹಸಗಳಿಗೆ ಸಲಾಂ,’ ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video : ಉರುಳಿ ಬಿದ್ದ ಕಾರನ್ನು ಎತ್ತಲು ಹಲವು ಜನರು ಸೇರಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್