
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ನ (United States) ಲಾಸ್ ವೇಗಾಸ್ನಲ್ಲಿ ರಷ್ಯಾ ತಯಾರಿತ ವೋಡ್ಕಾ ಖರೀದಿಸುವವರ ಸಂಖ್ಯೆ ಮಿತಿಮೀರಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವುದನ್ನು ಯುಎಸ್ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದೆ. ಹೀಗಿದ್ದ ಮೇಲೆ ಅಲ್ಲಿನ ಜನರು ಯಾಕೆ ರಷ್ಯಾ ವೋಡ್ಕಾವನ್ನು ಈ ಪರಿ ಖರೀದಿಸುತ್ತಿದ್ದಾರೆ? ಖುಷಿಗಾಗಿ ವೋಡ್ಕಾ ಖರೀದಿ ಮಾಡ್ತಿದ್ದಾರಾ? ಎಂಬಿತ್ಯಾದಿ ಪ್ರಶ್ನೆ ಮೂಡ್ತಿರಬಹುದು. ಆದರೆ ವಾಸ್ತವ ಎಂದರೆ, ಜನರು ತಾವು ಖರೀದಿಸಿದ ವೋಡ್ಕಾವನ್ನು ಚರಂಡಿಗೆ ಸುರಿಯುತ್ತಿದ್ದಾರೆ. ಈ ಮೂಲಕ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ವಿರೋಧಿಸುತ್ತಿದ್ದಾರೆ.
ಯುಎಸ್ನ ಮದ್ಯಪ್ರಿಯರು ಉಕ್ರೇನ್ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಉಪಕ್ರಮವನ್ನು ಶುರುಮಾಡಿದ್ದು ಲಾಸ್ ವೇಗಾಸ್ನಲ್ಲಿರುವ ಒಂದು ಬಾರ್. ಮತ್ತೇನೂ ಅಲ್ಲ, ಇವರೆಲ್ಲ ಪುಕ್ಕಟೆಯಾಗಿ ರಷ್ಯಾ ವೋಡ್ಕಾವನ್ನು ಹಾಳುಗೆಡವುತ್ತಿಲ್ಲ. ಹಣಕೊಟ್ಟು ಖರೀದಿ ಮಾಡಿ, ನಂತರ ಅದನ್ನು ತೆಗೆದುಕೊಂಡು ಹೋಗಿ ಚರಂಡಿಗೆ ಸುರಿಯುತ್ತಿದ್ದಾರೆ. ನಂತರ ಇವರೆಲ್ಲ ಪಾವತಿಸಿದ ಹಣವನ್ನು ಉಕ್ರೇನ್ಗೆ ಮಾನವೀಯ ನೆರವಿನ ರೂಪದಲ್ಲಿ ಕಳಿಸಲು ಬಾರ್ ನಿರ್ಧಾರ ಮಾಡಿದೆ. ಪುಟಿನ್ ಉಕ್ರೇನ್ನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅವರು ಅಲ್ಲಿಂದ ಹೋಗುವವರೆಗೂ ಹೀಗೆ ರಷ್ಯಾದ ವೋಡ್ಕಾ ಖರೀದಿಸಿ, ಚೆಲ್ಲುವ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಲಾಸ್ ವೇಗಾಸ್ ಬಾರ್ ಮಾಲೀಕರು ಹೇಳಿದ್ದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಅಷ್ಟೇ ಅಲ್ಲ, ಯುಎಸ್ನಲ್ಲಿ ರಷ್ಯಾ ವೋಡ್ಕಾ ನಿರ್ಬಂಧಿಸಿ ಎಂಬ ಅಭಿಯಾನ ಟ್ವಿಟರ್ನಲ್ಲೂ ಶುರುವಾಗಿದೆ.
ಇದನ್ನೂ ಓದಿ: ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್ನಿಂದ ತಪ್ಪಿಸಿಕೊಂಡು ಉಕ್ರೇನ್ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು