Viral Video: ಮ್ಯಾನ್​ಹೋಲ್​ಗೆ ಬಿದ್ದ ಆನೆ ಮರಿಯ ರಕ್ಷಣೆ ವೇಳೆ ಉನ್ಮಾದದಿಂದ ಕುಸಿದುಬಿದ್ದ ತಾಯಿ ಆನೆ

| Updated By: Rakesh Nayak Manchi

Updated on: Jul 15, 2022 | 5:52 PM

ತನ್ನ ಮರಿ ಮ್ಯಾನ್​ಹೋಲ್​ಗೆ ಬಿದ್ದಾಗ ತಾಯಿ ಆನೆ ಉನ್ಮಾದಗೊಂಡು ಕುಸಿದು ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Viral Video: ಮ್ಯಾನ್​ಹೋಲ್​ಗೆ ಬಿದ್ದ ಆನೆ ಮರಿಯ ರಕ್ಷಣೆ ವೇಳೆ ಉನ್ಮಾದದಿಂದ ಕುಸಿದುಬಿದ್ದ ತಾಯಿ ಆನೆ
ಮ್ಯಾನ್​ಹೋಲ್​ಗೆ ಬಿದ್ದ ಆನೆಗಳ ರಕ್ಷಣೆ
Follow us on

ತಾಯಿಯ ಸಂಬಂಧವೇ ಹಾಗೆ, ಮಗುವಿಗೆ ಏನಾದರೂ ಆದರೆ ಅಳುತ್ತಾಳೆ, ಚೀರುತ್ತಾಳೆ ಅಥವಾ ಮೂರ್ಛೆ ಹೋಗುತ್ತಾಳೆ. ಇಂತಹ ಘಟನೆಗಳು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ನಡೆಯುತ್ತದೆ. ಇದಕ್ಕೆ ಸಾಕ್ಷಿ ಥಾಯ್ಲೆಂಡ್​ನ ಆನೆ. ತನ್ನ ಮರಿ ಮ್ಯಾನ್​ಹೋಲ್​ಗೆ ಬಿದ್ದಾಗ ತಾಯಿ ಆನೆ (Elephant) ಉನ್ಮಾದಗೊಂಡು ಕುಸಿದು ಬಿದ್ದಿದೆ. ಸದ್ಯ  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (video viral) ಆಗುತ್ತಿದೆ.

ಸಿಬಿಎಸ್ ನ್ಯೂಸ್ ಪ್ರಕಾರ, ಥಾಯ್ಲೆಂಡ್​ನ ನಖೋನ್ ನಯೋಕ್ ಪ್ರಾಂತ್ಯದಲ್ಲಿ ಬುಧವಾರ ಈ ಘಟನೆ ನಡೆದಿದೆ. ಮರಿ ಆನೆಯೊಂದು ಒಳಚರಂಡಿ ತೊಟ್ಟಿಗೆ ಜಾರಿ ಬಿದ್ದು ಸಹಾಯಕ್ಕಾಗಿ ಜೋರಾಗಿ ಘೀಳಿಡಲು ಪ್ರಾರಂಭಿಸಿದೆ. ಇನ್ನೊಂದೆಡೆ ತನ್ನ ಮರಿಯ ರಕ್ಷಣೆಯ ಒತ್ತಡಕ್ಕೆ ಬಿದ್ದ ತಾಯಿ ಆನೆ ಕೂಡ ಮ್ಯಾನ್​ಹೋಲ್​ಗೆ ಬಿದ್ದಿದೆ. ಈ ಬಗ್ಗೆ ದಾರಿಹೋಕರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ತೀವ್ರ ಒತ್ತಡದಲ್ಲಿದ್ದ ತಾಯಿಗೆ ಅರಿವಳಿಕೆ ಮದ್ದು ನೀಡಿದರು.

ಅದರಂತೆ ರಕ್ಷಣಾ ತಂಡವು ಕ್ರೇನ್ ಸಹಾಯದಿಂದ ದೊಡ್ಡ ಆನೆಯನ್ನು ಮ್ಯಾನ್​ಹೋಲ್​ನಿಂದ ಎತ್ತಿದರು. ಅರವಳಿಕೆ ನೀಡಿದ್ದರಿಂದಾಗಿ ಪ್ರಜ್ಞೆ ತಪ್ಪಿದ್ದ ದೊಡ್ಡ ಆನೆಗೆ ಸಿಪಿಆರ್ ಮಾಡಿ ಮತಿಬರಿಸುವ ಪ್ರಯತ್ನದ ನಡುವೆ ಮ್ಯಾನ್​ಹೋಲ್​ನಲ್ಲಿದ್ದ 1 ವರ್ಷದ ಆನೆ ಮರಿ ಮೇಲೆ ಬರಲು ದಾರಿ ಮಾಡಿಕೊಡಲಾಯಿತು. ಆ ಮೂಲಕ ಆನೆಮರಿ ಮೇಲ್ಬಂದು ತಾಯಿಯ ಬಳಿ ಹೋಯಿತು. ಮತಿ ಬಂದ ನಂತರ ತಾಯಿಯು ತನ್ನ ಮರಿಯೊಂದಿಗೆ ಕಾಡಿಗೆ ನಡೆದುಕೊಂಡು ಹೋಗಿದೆ.

ಇದರ ವಿಡಿಯೋ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ 1.5 ಲಕ್ಷ ವೀಕ್ಷಣೆಗಳನ್ನು ಗಳಿಸಿದ್ದು, 60ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ರಕ್ಷಣಾ ತಂಡ ಕೈಗೊಂಡ ತ್ವರಿತ ಕ್ರಮವನ್ನು ನೆಟಿಜನ್‌ಗಳು ಶ್ಲಾಘಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು, “ಅದ್ಭುತ! ಆ ಜನರು ನಿಜವಾದ ಹೀರೋಗಳು” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಆನೆ ರಕ್ಷಕರನ್ನು ಹೀರೋಗಳು ಎಂದು ಕರೆದಿದ್ದಾರೆ.

Published On - 5:52 pm, Fri, 15 July 22