
ನಾಯಿಗಳು ಮನುಷ್ಯರ ಉತ್ತಮ ಸ್ನೇಹಿತ. ಇನ್ನೂ ಜರ್ಮನ್ ಶೆಫರ್ಡ್ ತಳಿಯಂತಹ ಶ್ವಾನಗಳಿಗೆ ತರಬೇತಿಯನ್ನು ನೀಡಿ ಅವುಗಳನ್ನು ಭದ್ರತಾ ಪಡೆಗಳೊಂದಿಗೆ ಸೇವೆ ಸಲ್ಲಿಸಲು ಆಯೋಜಿಸಲಾಗುತ್ತದೆ. ದೇಶ ರಕ್ಷಣೆಗಾಗಿ ಭದ್ರತಾ ಪಡೆಗಳೊಂದಿಗೆ ಕಾರ್ಯನಿರ್ವಹಿಸುವ ಈ ಶ್ವಾನಗಳು ಪ್ರಾಣಕ್ಕೆ ಕುತ್ತು ತರುವಂತಹ ಬಾಂಬ್ ಗಳ ಇರುವಿಕೆಯ ಸುಳಿವನ್ನು ಪತ್ತೆ ಮಾಡಿ ಅನೇಕರ ಜೀವಗಳನ್ನು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ರಕ್ಷಿಸಿರುವ ಅದೆಷ್ಟೋ ಉದಾಹರಣೆಗಳಿವೆ. ಅಂತೆಯೇ ಸಿಐಎಸ್ಎಫ್ (ಕೇಂದ್ರ ಕೈಗಾರಿಕ ಭದ್ರತಾ ಪಡೆ) ನಲ್ಲಿ ಸತತ 8 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಿಷ್ಟಾವಂತ ಮೂರು ಪೋಲಿಸ್ ನಾಯಿಗಳು ಇತ್ತೀಚಿಗೆ ತಮ್ಮ ಸೇವೆಗೆ ನಿವೃತ್ತಿಯನ್ನು ಹೊಂದಿದ್ದು, ಅವುಗಳ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮದ ಭಾವನಾತ್ಮಕ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶ್ವಾನಗಳ ನಿಸ್ವಾರ್ಥ ಸೇವೆಗಾಗಿ ಅವುಗಳಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.
ಸಿಐಎಸ್ಎಫ್ನ ಮೂರು ಪೋಲಿಸ್ ಶ್ವಾನಗಳಾದ ರಾಕಿ, ರೋಮಿಯೋ ಮತ್ತು ಡಿಎಂಆರ್ಸಿ ಘಟಕದ ಸೋನಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವುಗಳಿಗೆ ಇದೇ ಬುಧವಾರದಂದು ನಿವೃತ್ತಿಯನ್ನು ಘೋಷಿಸಲಾಯಿತು. ಸಿಐಎಸ್ಎಫ್ (ಕೇಂದ್ರ ಕೈಗಾರಿಕ ಭದ್ರತಾ ಪಡೆ) ನಲ್ಲಿ ಸಮರ್ಪಿತ ಸೇವೆಗಾಗಿ ಮತ್ತು ಈ ಶ್ವಾನಗಳು ಪ್ರದರ್ಶಿಸಿದ ವರ್ಷಗಳ ಪರಿಶ್ರಮ, ನಿಷ್ಠೆಯನ್ನು ಶ್ಲಾಘಿಸಲು ಹಾಗೂ ಅವುಗಳ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ದೆಹಲಿಯಲ್ಲಿ ಸಿಐಎಸ್ಎಫ್ ಸಿಬ್ಬಂದಿ ವರ್ಗ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಆದರೆ ಸೋನಿ ಎಂಬ ಜರ್ಮನ್ ಶೆಫರ್ಡ್ ನಾಯಿ ಅನಾರೋಗ್ಯದ ಕಾರಣದಿಂದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಎಂದು ಎಎನ್ಐ ಟ್ವಿಟರ್ ನಲ್ಲಿ ಬರೆದುಕೊಂಡಿದೆ.
ಸುದ್ದಿ ಸಂಸ್ಥೆ ಎಎನ್ಐ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಈ ವಿಶೇಷ ವೀಡಿಯೋ ಬೀಳ್ಕೊಡುಗೆ ಸಮಾರಂಭದ ಹೃದಯಸ್ಪರ್ಶಿ ಕ್ಷಣಗಳನ್ನು ಸೆರೆ ಹಿಡಿದಿದೆ. ರೆಡ್ ಕಾರ್ಪೇಟ್ ಮೇಲೆ ಶ್ವಾನಗಳನ್ನು ಗೌರವಾನ್ವಿತವಾಗಿ ಕರೆತಂದು ಅವುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ಭಾವನಾತ್ಮಕ ಸನ್ನಿವೇಶವನ್ನು ವೀಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ:Viral Video : ಎರಡನೇ ಕ್ಲಾಸಿನ ಮಕ್ಕಳ ‘ಭೇಲ್ಪುರಿ’ಗೆ 10 ಮಿಲಿಯನ್ ನೆಟ್ಟಿಗರು ಫಿದಾ
ಮೇ 31 ರಂದು ಹಂಚಿಕೊಳ್ಳಲಾದ ಈ ವೀಡಿಯೋ ಕೇವಲ ಒಂದೇ ದಿನದಲ್ಲಿ 304.7 ಸಾವಿರ ವೀಕ್ಷಣೆಗಳನ್ನು ಮತ್ತು 3,249 ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಶ್ವಾನಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಟ್ವಿಟರ್ ಬಳಕೆದಾರರು ಕಮೆಂಟ್ ಗಳ ಮೂಲಕ ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರರು ‘ಹೃದಯಸ್ಪರ್ಶಿ ಸಮಾರಂಭ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಿಮ್ಮ ರಾಷ್ಟ್ರ ಸೇವೆಗೆ ಧನ್ಯವಾದಗಳು ರಾಕಿ, ಸೋನಿ, ರೋಮಿಯೋ’ ಎಂದು ಹೇಳಿದ್ದಾರೆ ಮತ್ತೊಬ್ಬ ಬಳಕೆದಾದರು ‘ನೀವು ಕನಿಷ್ಠ ಪಕ್ಷ ಸೋನಿಯ ಭಾವಚಿತ್ರವನ್ನಾದರೂ ಪೋಸ್ಟ್ ಮಾಡಬೇಕಾಗಿತ್ತು ಎಂದು ಬರೆದುಕೊಂಡಿದ್ದಾರೆ.