ದಕ್ಷಿಣ ಭಾರತೀಯ ಚಲನಚಿತ್ರಗಳು ಸಿನಿ ಪ್ರಿಯರಿಗೆ ಹಾಗೂ ಸಂಗೀತ ಪ್ರಿಯರಿಗೆ ಉತ್ಸಾಹಭರಿತ ಹಾಡುಗಳನ್ನು ಉಡುಗೊರೆಯಾಗಿ ನೀಡುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿನ ಹಾಡುಗಳಿಗೆ ಸಖತ್ ಸ್ಟೆಪ್ಗಳನ್ನು ಹಾಕುವ ನಟರ ಪೈಕಿ ತಮಿಳು ನಟ ಧನುಷ್ ಅವರು ಕೂಡ ಒಬ್ಬರು. ಧನುಷ್ ಅಭಿನಯದ ಮಾರಿ2 ಚಿತ್ರದ ರೌಡಿ ಬೇಬಿ ಹಾಡಿನಲ್ಲಿ ಮಾಡಲಾದ ಅದ್ಭುತ ನೃತ್ಯ ಹೆಚ್ಚಿನವರಿಗೆ ಈಗಲೂ ಇಷ್ಟ. ಈ ಹಾಡು ಬಿಡುಗಡೆಯಾದಾಗಿನಿಂದ ಪಾರ್ಟಿ ಹಾಡಾಗಿ ಮಾರ್ಪಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ. ಅಂದರೆ ಯಾವುದೇ ಪಾರ್ಟಿ ಇದ್ದರೆ ಅಲ್ಲಿ ರೌಡಿ ಬೇಬಿ ಹಾಡು ಹೆಚ್ಚಾಗಿ ಇದ್ದೇ ಇರುತ್ತದೆ. ಇದೀಗ ಈ ಹಾಡು ವಿದೇಶದಲ್ಲಿ ಸೌಂಡ್ ಮಾಡಲು ಆರಂಭಸಿದೆ. ಯುಎಸ್ನ ಉತ್ತರ ಕೆರೊಲಿನಾದ ಯುವಕನೊಬ್ಬ ರೌಡಿ ಬೇಬಿಗೆ ಹಾಕಿದ ಸಖತ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೀನ್ ಟೆನೆಡಿನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ವೊಂದನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಅವರು ಧನುಷ್ ಮತ್ತು ಸಾಯಿ ಪಲ್ಲವಿ ಅಭಿನಯದ ರೌಡಿ ಬೇಬಿ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೋ ಹಂಚಿಕೊಂಡಾಗಿನಿಂದ ಈವರೆಗೆ 3.14 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, ಹಲವಾರು ಕಾಮೆಂಟ್ಗಳು ಬರುತ್ತಿವೆ.
ವಿಡಿಯೋ ನೋಡಿದ ಒಂದಷ್ಟು ಮಂದಿ ಕಾಮೆಂಟ್ ಬಾಕ್ಸ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಅದ್ಭುತವಾದ ವಿಡಿಯೋ” ಎಂದು ಹೇಳಿಕೊಂಡಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ವಾವ್ ಅಣ್ಣಾ ನಾನು ಇದನ್ನು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ತುಂಬಾ ಚೆನ್ನಾಗಿದೆ! ದಯವಿಟ್ಟು ಧನುಷ್ ಅವರ ಮನ್ಮಧ ರಸಕ್ಕೆ ನೃತ್ಯ ಮಾಡಬಹುದೇ?” ಎಂದು ಮನವಿ ಮಾಡಿಕೊಂಡಿದ್ದಾರೆ. “ನಿಮ್ಮ ಡ್ಯಾನ್ಸ್ ಅದ್ಭುತವಾಗಿದೆ ಸಹೋದರ…ನನಗೆ ಇಷ್ಟವಾಗಿದೆ” ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.