
ನಟ-ನಟಿಯರು ತಮ್ಮ ಚಲನಚಿತ್ರದ ಪ್ರೀಮಿಯರ್‌ಗೆ ಹೋಗುವುದನ್ನು ನಾವೆಲ್ಲರೂ ನೋಡಿದ್ದೇವೆ ಮತ್ತು ಇದು ಸಾಮಾನ್ಯ ವಿಚಾರವಾಗಿದೆ. ಆದರೆ ನೀವು ಯಾವತ್ತಾದರೂ ನಾಯಿ ಚಲನಚಿತ್ರದ ಪ್ರೀಮಿಯರ್‌ಗೆ ಹೋಗುವುದನ್ನು ನೀವು ನೋಡಿದ್ದೀರಾ? ನೋಡಿಲ್ಲಾ ಎಂದಾದರೆ ಈಗ ನೋಡಬಹುದು. ನಾಯಿಯೊಂದು ಚಲನಚಿತ್ರದ ಪ್ರೀಮಿಯರ್‌ಗೆ ಹೋಗುವ ವಿಡಿಯೋ ವೈರಲ್ (Viral Video) ಆಗುತ್ತಿದ್ದು, ಇಂಟರ್ನೆಟ್ನಲ್ಲಿ ಲಕ್ಷಾಂತರ ನೆಟ್ಟಿಗರ ಹೃದಯಗಳನ್ನು ಗೆಲ್ಲುತ್ತಿದೆ. ವಿಡಿಯೋ ನೋಡಿದ ಮೇಲೆ ಈ ನಾಯಿಯು ನಿಮ್ಮ ಹೃದಯವನ್ನೂ ಗೆಲ್ಲಬಹುದು.
ವೈರಲ್ ವಿಡಿಯೋದಲ್ಲಿ ಇರುವಂತೆ, ಕೃತಕ ಹೂವಿನ ಹಗ್ಗದಲ್ಲಿ ಕಾರಿನಲ್ಲಿ ಬಂದ ನಾಯಿ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ವೇದಿಕೆಗೆ ಹೋಗುತ್ತದೆ. ಗಮನಿಸಬೇಕಾದ ಅಂಶವೆಂದರೆ ನಟ-ನಟಿಯರಂತೆ ಅಭಿಮಾನಿಗಳತ್ತ ಹೋಗುವುಂತೆ ಆ ನಾಯಿ ಕೂಡ ಬಾಲ ಅಲ್ಲಾಡಿಸುತ್ತಾ ಖುಷಿ ಖುಷಿಯಿಂದ ನೆರೆದಿದ್ದವರ ಬಳಿ ಹೋಗುತ್ತಾ ವೇದಿಗೆ ಮೇಲೆ ಹೋಗಿದೆ. ಈ ವೇಳೆ ನಾಯಿಗೆ ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ನಂತರ ಛಾಯಗ್ರಾಹಕರು ನಾಯಿಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ನಾಯಿ ಫೋಟೋಗೆ ಸಖತ್ ಆಗಿ ಪೋಸ್ ಕೊಟ್ಟಿದ್ದು, ವ್ಯಕ್ತಿಯೊಬ್ಬರಿಗೆ ಶೇಕ್ ಹ್ಯಾಂಡ್ ಮಾಡಲು ಕೈ ಮೇಲಕ್ಕೆತ್ತುವುದುನ್ನು ನೋಡಬಹುದು.
ನಂತರ ನಾಯಿ ಪಾವ್ಸ್ ಆಫ್ ಫ್ಯೂರಿ: ದಿ ಲೆಜೆಂಡ್ ಆಫ್ ಹ್ಯಾಂಕ್ ಚಲನಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟಕ್ಕೂ ಫೇಮಸ್ ಆಗುತ್ತಿರುವ ಈ ನಾಯಿಯ ಹೆಸರು ಲೇಡಿ. ಚಲನಚಿತ್ರದಲ್ಲಿ ನಟಿಸಿದ ನಂತರ ಸಖತ್ ಫೇಮಸ್ ಆಗುತ್ತಿದೆ. ಆ ಮೂಲಕ ಲೇಡಿ ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ.
ಈ ನಾಯಿಯ ಹೆಸರಿನಲ್ಲಿ Ladyandtheblues ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆಯಲಾಗಿದ್ದು, 2 ಲಕ್ಷಕ್ಕೂ ಅಧಿಕ ಫಾಲೋವರ್ಗಳನ್ನು ಹೊಂದಿದೆ. ಈ ಖಾತೆಯಲ್ಲಿ ಲೇಡಿಯ ಸಾಕಷ್ಟು ಫೋಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ಪೈಕಿ ಎರಡು ದಿನದ ಹಿಂದೆ ಪೋಸ್ಟ್ ಮಾಡಲಾದ ನಾಯಿ ಪ್ರೀಪಿಯರ್ ಶೋಗೆ ಹೋಗುವುದು ಕೂಡ ಸೇರಿದೆ. “POV: ನಿಮ್ಮ ನಾಯಿ ನಿಮಗಿಂತ ಹೆಚ್ಚು ಪ್ರಸಿದ್ಧವಾಗಿದೆ, ಎಂದೆಂದಿಗೂ ಇರುತ್ತದೆ” ಎಂದು ವಿಡಿಯೋ ಪೋಸ್ಟ್ಗೆ ಶೀರ್ಷಿಕೆ ಬರೆದು #doginfluencer ಮತ್ತು #moviepremiere ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಲಾಗಿದೆ.
ಈ ವಿಡಿಯೋ ವೈರಲ್ ಪಡೆದು 43 ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, ಹಲವಾರು ಕಾಂಮೆಂಟ್ಗಳು ಬಂದಿವೆ. ಬಳಕೆದಾರರೊಬ್ಬರು, “ಅವಳು ಸ್ಟಾರ್, ನಾನು ನೋಡಲು ಬರುತ್ತೇನೆ, ಲವ್ ಯು ಲೇಡಿ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಂಮೆಂಟ್ ಮಾಡಿ, ಚಾರ್ಲಿ ಎಂಬ ಗೋಲ್ಡನ್ ರಿಟ್ರೈವರ್‌ಗೆ ಮೀಸಲಾದ ಮತ್ತೊಂದು Instagram ಪುಟವನ್ನು ಹಂಚಿಕೊಂಡಿದ್ದಾರೆ. ಮಗದೊಬ್ಬರು ಕಾಂಮೆಂಟ್ ಮಾಡಿ, “ಲೇಡಿ ಬಗ್ಗೆ ತುಂಬಾ ಹೆಮ್ಮೆ!” ಎಂದರು.
Published On - 1:27 pm, Mon, 18 July 22