ಉಕ್ರೇನಿನ ಈ ಕಲಾವಿದೆಯ ವಯೋಲಿನ್​ನಲ್ಲಿ ‘ಪಸೂರಿ’ಯ ಮಾಧುರ್ಯ ಹೊಮ್ಮಿದ ಅಪೂರ್ವ ಕ್ಷಣ

| Updated By: ಶ್ರೀದೇವಿ ಕಳಸದ

Updated on: Oct 11, 2022 | 4:02 PM

Pasoori : ಕ್ಯಾಲಿಫೋರ್ನಿಯಾದ ಬೀದಿಯಲ್ಲಿ ಉಕ್ರೇನಿನ ಕಲಾವಿದೆಯೊಬ್ಬಳು ಪಾಕಿಸ್ತಾನಿ ಕಲಾವಿದ ಅಲಿ ಸೇಥಿಯ ‘ಪಸೂರಿ’ ಹಾಡನ್ನು ವಯೋಲಿನ್​ನಲ್ಲಿ ನುಡಿಸಿದ ಆ ಕ್ಷಣಗಳು... 4.1 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

ಉಕ್ರೇನಿನ ಈ ಕಲಾವಿದೆಯ ವಯೋಲಿನ್​ನಲ್ಲಿ ‘ಪಸೂರಿ’ಯ ಮಾಧುರ್ಯ ಹೊಮ್ಮಿದ ಅಪೂರ್ವ ಕ್ಷಣ
ಬೀದಿಯಲ್ಲಿ ಪ್ರದರ್ಶನ ನೀಡುತ್ತಿರುವ ಉಕ್ರೇನಿನ ಕಲಾವಿದೆ
Follow us on

Viral Video : ಈ ಉಕ್ರೇನಿನ 13 ವರ್ಷದ ಈ ಕಲಾವಿದೆ ಕ್ಯಾಲಿಫೋರ್ನಿಯಾದ ಬೀದಿಯಲ್ಲಿ ‘ಪಸೂರಿ’ ಹಾಡನ್ನು ವಯೋಲಿನ್​ನಲ್ಲಿ ನುಡಿಸುತ್ತಿದ್ದರೆ ಸುತ್ತಮುತ್ತಲೂ ಜನ ಮೂಕವಿಸ್ಮಿತರಾಗಿ ಆಲಿಸುತ್ತಿದ್ದಾರೆ. ಪಕ್ಕದಲ್ಲೇ ಒಂದು ಪುಟ್ಟ ಹೆಣ್ಣುಮಗು ನೃತ್ಯದಲ್ಲಿ ಮೈಮರೆತಿದೆ. ಕಲೆಯ ಶಕ್ತಿಯೇ ಅಗಾಧ. ಯಾವ ಭಾಷೆ ದೇಶವನ್ನೂ ಬೆಸೆಯುವ ಮಹಾನ್​ ದಿವ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಸುಮಾರು 4.1 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಕೋಕ್​ ಸ್ಟುಡಿಯೋದ ಸೀಸನ್​ 14ನ ಟ್ರ್ಯಾಕ್​ ಈ ಪಸೂರಿ ಹಾಡು. ಪಾಕಿಸ್ತಾನಿ ಕಲಾವಿದರಾದ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿರುವ ಈ ಹಾಡು ಜಗತ್ತಿನ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಹಾಡಿನ ಸಾಹಿತ್ಯ, ಸಂಗೀತ ಕೇಳಿದವರ ಹೃನ್ಮನ ತುಂಬುವಲ್ಲಿ ಎರಡು ಮಾತಿಲ್ಲ. ಪಂಜಾಬಿ ಮತ್ತು ಉರ್ದು ಭಾಷೆಯನ್ನು ಆಧರಿಸಿದ ಸಾಹಿತ್ಯವನ್ನು ಕೇಳಿಯೇ ಅನುಭವಿಸಬೇಕು. ಹೀಗೆ ಈ ಹಾಡನ್ನು ಅಮೆರಿಕದ ಬೀದಿಯಲ್ಲಿ ನಿಂತು ವಯೋಲಿನ್​ನಲ್ಲಿ ನುಡಿಸಿದ ಯುವ ಕಲಾವಿದೆಯ ಹೆಸರು ಕೆರೋಲಿನಾ ಪ್ರೊಟ್ಸೆಂಕೊ. ಇತ್ತೀಚೆಗೆ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.

ಈ ಹಾಡಿನ ನುಡಿಸಾಣಿಕೆಗೆ ಅರಬ್​ನ ಪುಟ್ಟ ಹೆಣ್ಣುಮಗು ನರ್ತಿಸಿದ್ದನ್ನು ವಿಡಿಯೋದಲ್ಲಿ ಗಮನಿಸಿರಬಹುದು. ‘ನನ್ನ ನುಡಿಸುವಿಕೆಗೆ ಈ ಪುಟ್ಟಹುಡುಗಿ ನರ್ತಿಸಿದ್ದು ನನಗೆ ಮತ್ತಷ್ಟು ಸ್ಫೂರ್ತಿ ತಂದಿದೆ’ ಎಂದಿದ್ದಾಳೆ ಕೆರೋಲಿನಾ. ಈಕೆಯ ಯೂಟ್ಯೂಬ್ ಚಾನೆಲ್​ಗೆ 7.6 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರು ಇದ್ದಾರೆ. ಪ್ರತೀ ವಿಡಿಯೋಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಈಕೆ ‘ದಿ ಎಲೆನ್ ಷೋ’ನಲ್ಲಿ ಕೂಡ ವಯೋಲಿನ್​ ಪ್ರದರ್ಶನ ನೀಡಿದ್ದಳು.

ಯಾವ ದೇಶದವರು ಎಲ್ಲಿ ನಿಂತು ನುಡಿಸಿದರೂ ಆ ಸಪ್ತಸ್ವರಗಳೇ. ಹೊಮ್ಮಿಸುವ ರಸಭಾವಗಳೂ ಅವೇ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:56 pm, Tue, 11 October 22