ನಿಮ್ಮ ಮನೆಯಲ್ಲಿ ಸಾಕುಪ್ರಾಣಿ ಇದೆಯೇ? ನಿಮ್ಮ ಮುದ್ದಿನ ನಾಯಿ ಅಥವಾ ಬೆಕ್ಕು, ಹಸುಗಳು ನೀವು ಹೇಳಿದ ಮಾತನ್ನು ಕೇಳುವುದಿಲ್ಲವೇ? ನಿಮ್ಮ ಮನೆಯ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ, ನಿಮಗೆ ದಿನವೂ ತಲೆನೋವು ತಂದಿಡುತ್ತಾವೆಯೇ? ನಿಮ್ಮ ಉತ್ತರ ಹೌದು ಎಂದಾದರೆ ಕುವೈತ್ನ ಈ ಮಹಿಳೆಯ ಕಷ್ಟ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಸಿಂಹಿಣಿಯನ್ನು ಹೊತ್ತಿರುವ ದೃಶ್ಯವನ್ನು ನೋಡಬಹುದು. ಈ ವಿಡಿಯೋ ಕ್ಲಿಪ್ ಖಂಡಿತವಾಗಿಯೂ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಅಷ್ಟಕ್ಕೂ ಆಕೆ ಸಿಂಹವನ್ನು ತೋಳಲ್ಲಿ ಹೊತ್ತುಕೊಂಡು ರಸ್ತೆಯಲ್ಲಿ ನಡೆದಿದ್ದೇಕೆ?
ಎಲ್ಲರೂ ಬೆಕ್ಕು, ನಾಯಿ, ಹಸು, ಕೋಳಿ, ಕುರಿಗಳನ್ನು ಸಾಕಿದರೆ ಕುವೈತ್ನ ಮಹಿಳೆ ತನ್ನ ಮನೆಯಲ್ಲಿ ಹೆಣ್ಣು ಸಿಂಹದ ಮರಿಯೊಂದನ್ನು ಸಾಕಿದ್ದಳು! ಆ ಸಿಂಹಿಣಿ ಮನೆಯಿಂದ ತಪ್ಪಿಸಿಕೊಂಡು ಹೋಗಿತ್ತು. ಕುವೈತ್ ನಗರದ ದಕ್ಷಿಣ ಭಾಗದಲ್ಲಿರುವ ಸಬಾಹಿಯಾ ಪ್ರದೇಶದಲ್ಲಿ ಸಿಂಹಿಣಿ ತಪ್ಪಿಸಿಕೊಂಡ ಘಟನೆ ಭಾನುವಾರ ನಡೆದಿತ್ತು. ಮನೆಯಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ ಸಿಂಹವನ್ನು ನೋಡಿ ಜನರು ಗಾಬರಿಗೊಂಡಿದ್ದರು. ತನ್ನ ಮನೆಯಿಂದ ತಪ್ಪಿಸಿಕೊಂಡಿದ್ದ ಆ ಹೆಣ್ಣು ಸಿಂಹವನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಆಕೆ ಮನೆಗೆ ಹೋಗಿದ್ದಾಳೆ.
My neighbor and her dog seemed to not be getting along last night pic.twitter.com/fUGcpuTkMY
— Arlong (@ramseyboltin) January 3, 2022
ಅರ್ಲಾಂಗ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಿಂಹ ಆ ಮಹಿಳೆಯ ತೋಳುಗಳಿಂದ ಕೆಳಗೆ ಹಾರಲು ಹೆಣಗಾಡುತ್ತಿದೆ. ಕುವೈತ್ ಪತ್ರಿಕೆ ಅಲ್-ಅನ್ಬಾ ಪ್ರಕಾರ, ಸಿಂಹಿಣಿಯನ್ನು ವೀಡಿಯೊದಲ್ಲಿ ಮಹಿಳೆ ಮತ್ತು ಆಕೆಯ ತಂದೆ ಸಾಕುಪ್ರಾಣಿಯಾಗಿ ಇಟ್ಟುಕೊಂಡಿದ್ದರು. ಆ ಸಿಂಹ ಆಕಸ್ಮಿಕವಾಗಿ ತಪ್ಪಿಸಿಕೊಂಡು ಬೀದಿಗಳಲ್ಲಿ ಅಲೆದಾಡುತ್ತಿದ್ದಾಗ ನಿವಾಸಿಗಳನ್ನು ಭಯಭೀತಗೊಳಿಸಿತ್ತು. ಬಳಿಕ ಅದನ್ನು ಆ ಮಹಿಳೆ ತನ್ನ ಮನೆಗೆ ವಾಪಾಸ್ ತಂದಿದ್ದಾರೆ.