ಗದಗ: ಅಧೋಗತಿಗೆ ತಲುಪಿದೆ ಶತಮಾನ ಪೂರೈಸಿದ ಸರ್ಕಾರಿ ಶಾಲೆ!

Edited By:

Updated on: Oct 27, 2025 | 9:40 AM

ಅದು ಶತಮಾನ ಪೂರೈಸಿದ ಸರ್ಕಾರಿ ಶಾಲೆ. ಅದೊಂದು ಕಾಲದಲ್ಲಿ ಭರಪೂರ ವಿದ್ಯಾರ್ಥಿಗಳಿದ್ದರು. ಆದರೆ, ಇದೀಗ ಅದೇ ಶಾಲೆ ಅಧೋಗತಿಗೆ ತಲುಪಿದೆ. ಹೊಸ ಕಟ್ಟಡ ನಿರ್ಮಾಣವಾದರೆ ಮತ್ತೆ ವಿದ್ಯಾರ್ಥಿಗಳ ಕಲರವ ಹೆಚ್ಚಾಗುವ ಆಸೆ ಕಾಡುತ್ತಿದೆ. ಆದರೆ, ಸಂಬಂಧಪಟ್ಟವರು ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದು ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಗೊತ್ತಾಗಿದೆ.

ಗದಗ, ಅಕ್ಟೋಬರ್ 27: ಪ್ಲಾಸ್ಟಿಂಗ್ ಕಿತ್ತು ಬಂದಿರುವ ಗೋಡೆ, ಕುಸಿದು ಬಿದ್ದಿರುವ ಮೇಲ್ಚಾವಣಿ, ಆಗಲೋ ಈಗಲೋ ಬೀಳುವ ಹಂತದಲ್ಲಿರುವ ಶತಮಾನದ ಸರ್ಕಾರಿ ಶಾಲೆ. ಜೀವ ಕೈಯಲ್ಲಿ ಹಿಡಿದು ಕೂತಿರುವ ಮಕ್ಕಳು. ಈ ದೃಶ್ಯ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇದು ಗದಗ ನಗರದ ಬೆಟಗೇರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ದಶಕದ ಹಿಂದೆ ಈ ಶಾಲೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದರು. ಆದ್ರೀಗ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದಾರೆ. ಕಾರಣ ಇಡೀ ಶಾಲೆಯ ಕಟ್ಟಡ ಕುಸಿದು ಬೀಳುವ ಸ್ಥಿತಿ ತಲುಪಿದೆ.

ಅಪಾಯಕಾರಿ ಕಟ್ಟಡ ನೋಡಿ ಮಕ್ಕಳನ್ನು ಈ ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಬಂದು ಹೋಗುತ್ತಾರೆ ಬಿಟ್ಟರೆ ಯಾವುದೇ ಪ್ರಯೋಜವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಳೆ ವಿದ್ಯಾರ್ಥಿಗಳು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಟಗೇರಿಯಲ್ಲಿ ಬಹುತೇಕ ಬಡ ಕುಟುಂಬಗಳೇ ಇವೆ. ಇಲ್ಲಿನ ಜನರಿಗೆ ಸರ್ಕಾರಿ ಶಾಲೆಯೇ ಆಸರೆ. ಆದರೆ ಮುರುಕಲು ಶಾಲೆಯ ಕಟ್ಟಡ ನೋಡಿ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ. ಕಳೆದ ವರ್ಷ 12 ಲಕ್ಷ ರೂ. ಖರ್ಚು ಶಾಲೆ ಮಾಡಿ ರಿಪೇರಿ ಮಾಡಲಾಗಿದೆ. ಆದರೆ ಮೇಲ್ಛಾವಣಿಗೆ ತಗಡಿನ ಶೀಟ್ ಹಾಕಿ 12 ಲಕ್ಷ ರೂ. ಗುಳುಂ ಮಾಡಿರುವ ಆರೋಪ ಕೇಳಿಬರುತ್ತಿದೆ. ಇನ್ನಾದರೂ ಶಿಕ್ಷಣ ಸಚಿವರು ಇತ್ತ ಗಮನ ಹರಿಸಬೇಕಿದೆ. ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಶತಮಾನ ಕಂಡ ಈ ಶಾಲೆಗೆ ಕಾಯಕಲ್ಪ ನೀಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ