ಆಸ್ಟ್ರೇಲಿಯನ್ ಓಪನ್ ಫೈನಲ್ಗೇರಿದ ನೊವಾಕ್ ಜೊಕೊವಿಕ್
Novak Djokovic Australian Open 2026: 2026 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ನೊವಾಕ್ ಜೊಕೊವಿಕ್ ಜಾನಿಕ್ ಸಿನ್ನರ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದು ಜೊಕೊವಿಕ್ ಅವರ 11 ನೇ ಆಸ್ಟ್ರೇಲಿಯನ್ ಓಪನ್ ಫೈನಲ್ ಆಗಿದ್ದು, ಅವರು ಇಲ್ಲಿಯವರೆಗೆ ಫೈನಲ್‌ನಲ್ಲಿ ಸೋತಿಲ್ಲ. 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಾಗಿ ಅವರು ವಿಶ್ವದ ನಂ. 1 ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ಈ ಐತಿಹಾಸಿಕ ಪಂದ್ಯಕ್ಕಾಗಿ ಟೆನಿಸ್ ಜಗತ್ತು ಕಾತರದಿಂದ ಕಾಯುತ್ತಿದೆ.
ಟೆನಿಸ್ ದಂತಕಥೆ ನೊವಾಕ್ ಜೊಕೊವಿಕ್ ವಿಶ್ವದ 2 ನೇ ಶ್ರೇಯಾಂಕಿತ ಆಟಗಾರ ಜಾನಿಕ್ ಸಿನ್ನರ್ ಅವರನ್ನು ಸೋಲಿಸುವ ಮೂಲಕ 2026 ರ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ತಮ್ಮ 25 ನೇ ಗ್ರ್ಯಾಂಡ್ ಸ್ಲ್ಯಾಮ್‌ಗೆ ಒಂದು ಹೆಜ್ಜೆ ದೂರದಲ್ಲಿರುವ ಜೊಕೊವಿಕ್ ಫೈನಲ್‌ನಲ್ಲಿ ವಿಶ್ವದ 1 ನೇ ಶ್ರೇಯಾಂಕಿತ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ಸುಮಾರು ನಾಲ್ಕು ಗಂಟೆ 10 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು 3-6, 6-3, 4-6, 6-4, 6-4 ಸೆಟ್‌ಗಳಿಂದ ಗೆದ್ದ ಜೊಕೊವಿಕ್, ಸಿನ್ನರ್ ಅವರ ಸತತ ಐದು ಪಂದ್ಯಗಳ ಗೆಲುವಿನ ಸರಣಿಯನ್ನು ಮುರಿದರು.
38 ವರ್ಷದ ಸರ್ಬಿಯಾ ಸ್ಟಾರ್ ಜೊಕೊವಿಕ್ ಮೊದಲ ಸೆಟ್ ಸೋತ ನಂತರ ಬಲವಾದ ಪುನರಾಗಮನ ಮಾಡಿ, ಎರಡನೇ ಮತ್ತು ನಾಲ್ಕನೇ ಸೆಟ್‌ಗಳನ್ನು ಗೆದ್ದರು, ಆದರೆ ಸಿನ್ನರ್ ಮೊದಲ ಮತ್ತು ಮೂರನೇ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಐದನೇ ಸೆಟ್‌ನಲ್ಲಿ ಗೆಲುವು ಸಾಧಿಸಿದ ಜೊಕೊವಿಕ್ಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಇದು 11 ನೇ ಫೈನಲ್ ಆಗಿದ್ದು, ಒಮ್ಮೆಯೂ ಫೈನಲ್ ಸೋತಿಲ್ಲ. ಅಂದರೆ 10 ಬಾರಿ ಚಾಂಪಿಯನ್ ಆಗಿರುವ ಜೊಕೊವಿಕ್ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದ್ದಾರೆ.
ಫೈನಲ್ ಪಂದ್ಯವು ಭಾನುವಾರ, ಫೆಬ್ರವರಿ 1, 2026 ರಂದು ನಡೆಯಲಿದೆ. ಜೊಕೊವಿಕ್ ಅವರ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮತ್ತು ಅಲ್ಕರಾಜ್ ಅವರ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಪಣಕ್ಕಿಟ್ಟಿರುವ ಈ ಐತಿಹಾಸಿಕ ಫೈನಲ್ ಅನ್ನು ಟೆನಿಸ್ ಜಗತ್ತು ಕುತೂಹಲದಿಂದ ಕಾಯುತ್ತಿದೆ.