ಅನಾರೋಗ್ಯ ಪೀಡಿತ ಪತ್ನಿ ಕೊಲೆ: ವೈದ್ಯನ ಖತರ್ನಾಕ್​ ಪ್ಲ್ಯಾನ್​ಗೆ ಪೊಲೀಸರೇ ಶಾಕ್

Updated By: ಪ್ರಸನ್ನ ಹೆಗಡೆ

Updated on: Oct 15, 2025 | 4:44 PM

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಆದರೆ ಬೆಂಗಳೂರಲ್ಲೊಬ್ಬ ವೈದ್ಯ ತನ್ನ ಪತ್ನಿ ಪಾಲಿಗೆ ಯಮನಾಗಿದ್ದಾನೆ. ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್​ ನೀಡಿ ಕೊಂದು, ಇದೊಂದು ಸ್ವಾಭಾವಿಕ ಸಾವು ಎಂಬಂತೆ ಕುಟುಂಬಸ್ಥರನ್ನು ನಂಬಿಸಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ನಡೆದ 6 ತಿಂಗಳ ನಂತರ ಅಸಲಿ ಸತ್ಯ ಹೊರಬಂದಿದ್ದು, ಆರೋಪಿ ಡಾ. ಮಹೇಂದ್ರರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​ 15: ಇಂಜೆಕ್ಷನ್​ ನೀಡಿ ವೈದ್ಯೆ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ಖತರ್ನಾಕ್​ ಡಾಕ್ಟರ್​ನನ್ನು ಬೆಂಗಳೂರಿನ (Bengaluru) ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜನರಲ್ ಸರ್ಜನ್ ಡಾ.ಮಹೇಂದ್ರರೆಡ್ಡಿ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಈತ ಕೊಲೆ ಮಾಡಿದ್ದಾನೆ ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ. 2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹ ನಡೆದಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ, ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ, ಆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನ ಮಹೇಂದ್ರರೆಡ್ಡಿ ಕೊಂದಿದ್ದ. ಆದರೆ ಇದನ್ನು ಸಹಜ ಸಾವು ಎಂದೇ ಕುಟುಂಬದವರು ನಂಬಿದ್ದರು. ಅಂತಿಮವಾಗಿ FSL ವರದಿಯಿಂದ ಇದೊಂದು ಕೊಲೆ ಎಂಬುದು ದೃಢಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.