ಚಿಂತಾಮಣಿಗೆ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್: ಭಿಗಿ ಭದ್ರತೆ, ಪಾಸ್ ಇದ್ದೋರಿಗಷ್ಟೇ ಎಂಟ್ರಿ

Updated By: Ganapathi Sharma

Updated on: Oct 06, 2025 | 11:10 AM

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಆಗಮಿಸುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಕಾರ್ಯಕ್ರಮದ ಭದ್ರತೆಗಾಗಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರತಿಯೊಬ್ಬರನ್ನು ಮೆಟಲ್ ಡಿಟೆಕ್ಟರ್ ಮತ್ತು ಪಾಸ್ ಪರಿಶೀಲನೆ ಮೂಲಕ ಒಳಗಡೆ ಬಿಡಲಾಗುತ್ತಿದೆ. ನಕಲಿ ಪಾಸ್‌ಗಳ ಹಾವಳಿ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಚಿಕ್ಕಬಳ್ಳಾಪುರ, ಅಕ್ಟೋಬರ್ 6: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಆಂಧ್ರ ಡಿಸಿಎಂ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಖಾಸಗಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಕೆಲವೇ ಕ್ಷಣಗಳಲ್ಲಿ ಪವನ್ ಕಲ್ಯಾಣ್ ಆಗಮಿಸಲಿರುವ ಹಿನ್ನೆಲೆಯಲ್ಲಿ ಚಿಂತಾಮಣಿ, ಮುಳಬಾಗಿಲು, ಚಿಕ್ಕಬಳ್ಳಾಪುರ, ಅನಂತಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಬಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಓಜಿ ಚಲನಚಿತ್ರದಲ್ಲಿ ಪವನ್ ಕಲ್ಯಾಣ್ ಅವರ ಅಭಿನಯದಿಂದ ಪ್ರಭಾವಿತರಾದ ಅನೇಕ ಅಭಿಮಾನಿಗಳು ಅವರನ್ನು ನೇರವಾಗಿ ನೋಡಲು ಉತ್ಸುಕರಾಗಿದ್ದಾರೆ. ಕಾರ್ಯಕ್ರಮದ ಸ್ಥಳದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್‌ಪಿಗಳು, ಮೂವರು ಹೆಚ್ಚುವರಿ ಎಸ್‌ಪಿಗಳು ಮತ್ತು ಆರು ಮಂದಿ ಡಿವೈಎಸ್‌ಪಿಗಳು ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಎಚ್‌ಎಚ್‌ಎಂಡಿ (HHMD) ಮತ್ತು ಡಿಎಫ್‌ಎಂಡಿ (DFMD) ಮೆಟಲ್ ಡಿಟೆಕ್ಟರ್‌ಗಳ ಮೂಲಕ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ನಕಲಿ ಪಾಸ್‌ಗಳ ಬಳಕೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಪಾಸ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾತ್ರ ಪ್ರವೇಶ ನೀಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ