IND vs SA: ಕ್ಯಾಚ್ ಬಿಟ್ಟ ಜೈಸ್ವಾಲ್ಗೆ ಶತಕದ ಉಡುಗೊರೆ ನೀಡಿದ ಮಾರ್ಕ್ರಾಮ್
Aiden Markram Century: ರಾಯ್‌ಪುರ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಭಾರತದ ವಿರುದ್ಧ ಅಮೋಘ ಶತಕ ಗಳಿಸಿದರು. 53 ರನ್‌ಗಳಿದ್ದಾಗ ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈಬಿಟ್ಟಿದ್ದರಿಂದ ಜೀವ ಪಡೆದ ಮಾರ್ಕ್ರಾಮ್, 98 ಎಸೆತಗಳಲ್ಲಿ 110 ರನ್ ಬಾರಿಸಿದರು. ಇದು ಅವರ 4ನೇ ಏಕದಿನ ಶತಕವಾಗಿದ್ದು, ಆರಂಭಿಕ ಆಟಗಾರನಾಗಿ ಮತ್ತು ಭಾರತದ ವಿರುದ್ಧದ ಚೊಚ್ಚಲ ಶತಕವಾಗಿದೆ. ಈ ಇನ್ನಿಂಗ್ಸ್ ದಕ್ಷಿಣ ಆಫ್ರಿಕಾಕ್ಕೆ ಭಾರಿ ಬಲ ನೀಡಿತು.
ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಭಾರತದ ವಿರುದ್ಧ ರಾಯ್‌ಪುರದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದರು. ಇದು ಮಾರ್ಕ್ರಾಮ್ ಅವರ ನಾಲ್ಕನೇ ಏಕದಿನ ಶತಕವಾಗಿದ್ದು, ಮಾರ್ಕ್ರಾಮ್ ಅವರ ಶತಕದಲ್ಲಿ ಭಾರತದ ಆರಂಭಿಕ ಯಶಸ್ವಿ ಜೈಸ್ವಾಲ್ ಅವರು ಪ್ರಮುಖ ಪಾತ್ರ ವಹಿಸಿದರು. ವಾಸ್ತವವಾಗಿ ಮಾರ್ಕ್ರಾಮ್ 53 ರನ್‌ಗಳಿಸಿ ಆಡುತ್ತಿದ್ದಾಗ ಲಾಂಗ್-ಆನ್ ಬೌಂಡರಿಯಲ್ಲಿ ಜೈಸ್ವಾಲ್ಗೆ ಸರಳ ಕ್ಯಾಚ್ ನೀಡಿದ್ದರು. ಆದರೆ ಜೈಸ್ವಾಲ್ ಆ ಕ್ಯಾಚ್ ಅನ್ನು ಕೈಬಿಟ್ಟರು. ನಂತರ ಮತ್ತೊಂದು ಅವಕಾಶ ನೀಡಿದ ಮಾರ್ಕ್ರಾಮ್ ಆರಂಭಿಕ ಆಟಗಾರನಾಗಿ ತಮ್ಮ ಮೊದಲ ಶತಕ ಮತ್ತು ಭಾರತದ ವಿರುದ್ಧ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.
ರಾಯ್ಪುರ್ ಪಂದ್ಯದಲ್ಲಿ ಕಳಪೆ ಆರಂಭ ಪಡೆದ ಐಡೆನ್ ಮಾರ್ಕ್ರಾಮ್, ಹಲವಾರು ಬಾರಿ ಔಟಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಆದರೆ ಆ ಬಳಿಕ ಲಯ ಕಂಡುಕೊಂಡ ಮಾರ್ಕ್ರಾಮ್ 52 ಎಸೆತಗಳಲ್ಲಿ ತಮ್ಮ ಅರ್ಧಶತಕ ಮತ್ತು 88 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು. ಆದಾಗ್ಯೂ ಶತಕದ ನಂತರ ಹೊಡಿಬಡಿ ಆಟಕ್ಕೆ ಮುಂದಾದ ಮಾರ್ಕ್ರಾಮ್ 98 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 110 ರನ್ ಬಾರಿಸಿ ಹರ್ಷಿತ್ ರಾಣಾಗೆ ಬಲಿಯಾದರು.