ರೋಗಿಗಳ ರಕ್ಷಣೆಗೆ ಇರುವ ಆ್ಯಂಬುಲೆನ್ಸ್​ನಲ್ಲಿ ಜನರ ಸಾಗಾಟ! ಕುರಿಗಳಂತೆ ಜನ ತುಂಬಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್

Edited By:

Updated on: Mar 09, 2026 | 9:25 AM

ಗದಗ ಜಿಮ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಜನರನ್ನು ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ಇದು ಭಾರಿ ಚರ್ಚೆಗೆ ಕಾರಣವಾಗಿದ್ದು, ಜಿಮ್ಸ್ ಆಸ್ಪತ್ರೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದೆಯೇ? ಅಥವಾ ಸಿಬ್ಬಂದಿಯ ಕಳ್ಳಾಟವೇ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ರೋಗಿಗಳ ಸೇವೆಗೆ ಮೀಸಲಾಗಿರುವ ಆ್ಯಂಬುಲೆನ್ಸ್‌ನಲ್ಲಿ ಜನರ ಸಾಗಾಟ ಮಾಡುತ್ತಿರುವ ಆರೋಪಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗದಗ, ಮಾರ್ಚ್ 9: ರೋಗಿಗಳ ತುರ್ತು ಚಿಕಿತ್ಸೆಗೆ ಬಳಸಬೇಕಾದ ಆ್ಯಂಬುಲೆನ್ಸ್ ವಾಹನವನ್ನು ಜನರ ಸಾಗಾಟಕ್ಕೆ ಬಳಸಲಾಗಿದೆ ಎಂಬ ಆರೋಪ ಗದಗದಲ್ಲಿ ಕೇಳಿಬಂದಿದೆ. ಗದಗದ ಜಿಮ್ಸ್ (GIMS) ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಸಾಗಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ್ಯಂಬುಲೆನ್ಸ್ ಬಂದು ನಿಲ್ಲುತ್ತಿದ್ದಂತೆ ಹಲವರು ಅದಕ್ಕೆ ಮುಗಿಬಿದ್ದು ಹತ್ತುವ ದೃಶ್ಯಗಳು ಕಂಡುಬಂದಿವೆ. ರೋಗಿಗಳ ರಕ್ಷಣೆಗೆ ಇರಬೇಕಾದ ಆ್ಯಂಬುಲೆನ್ಸ್‌ನಲ್ಲಿ ಸಾಮಾನ್ಯ ಜನರನ್ನು ಸಾಗಾಟ ಮಾಡುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಗದಗ ಜಿಮ್ಸ್ ಆಸ್ಪತ್ರೆಯಿಂದ ಗದಗ ನಗರಕ್ಕೆ ಬಸ್ ಸೌಲಭ್ಯ ಕೊರತೆಯಿಂದ ಕೆಲವರು ಆ್ಯಂಬುಲೆನ್ಸ್‌ನ್ನು ಪ್ರಯಾಣಕ್ಕಾಗಿ ಬಳಸುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ರೋಗಿಗಳ ಹೊರತುಪಡಿಸಿ ಇತರರನ್ನು ಆ್ಯಂಬುಲೆನ್ಸ್‌ನಲ್ಲಿ ಸಾಗಾಟ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಇನ್ನೊಂದೆಡೆ, ಚಾಲಕ ಅಥವಾ ಸಿಬ್ಬಂದಿಯಿಂದ ಆ್ಯಂಬುಲೆನ್ಸ್ ದುರುಪಯೋಗವಾಗಿರಬಹುದೆಂಬ ಆರೋಪವೂ ಕೇಳಿಬಂದಿದೆ. ಈ ರೀತಿಯ ಘಟನೆಗಳಿಂದ ರೋಗಿಗಳಿಗೆ ಸೋಂಕಿನ ಭಯ ಮಾತ್ರವಲ್ಲ, ಸಾರ್ವಜನಿಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 09, 2026 09:24 AM
Follow Us