ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್

Updated on: Dec 31, 2025 | 9:35 AM

Desert Vipers vs MI Emirates: ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಡೆಸರ್ಟ್ ವೈಪರ್ಸ್ ಪರ ಇನಿಂಗ್ಸ್ ಆರಂಭಿಸಿದ ಆಂಡ್ರೀಸ್ ಗೌಸ್ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 120 ರನ್ ಬಾರಿಸಿದರು.

ಅಬುಧಾಬಿಯಲ್ಲಿ ನಡೆದ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆಂಡ್ರೀಸ್ ಗೌಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶೇಖ್ ಝಾಯೆದ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ಹಾಗೂ ಎಂಐ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಡೆಸರ್ಟ್ ವೈಪರ್ಸ್ ಪರ ಇನಿಂಗ್ಸ್ ಆರಂಭಿಸಿದ ಆಂಡ್ರೀಸ್ ಗೌಸ್ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 120 ರನ್ ಬಾರಿಸಿದರು.

ಈ ಮೂಲಕ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿ ಇತಿಹಾಸದಲ್ಲೇ ಗರಿಷ್ಠ ವೈಯುಕ್ತಿಕ ಸ್ಕೋರ್​ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಅಲೆಕ್ಸ್ ಹೇಲ್ಸ್​ ಹೆಸರಿನಲ್ಲಿತ್ತು. 2023 ರಲ್ಲಿ ಹೇಲ್ಸ್ 110 ರನ್​ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಇದೀಗ 120 ರನ್​ಗಳೊಂದಿಗೆ ಆಂಡ್ರೀಸ್ ಗೌಸ್ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು 20 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 233 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 20 ಓವರ್​ಗಳಲ್ಲಿ 188 ರನ್​ಗಳಿಸಿ 45 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಫೈನಲ್​ಗೆ ಪ್ರವೇಶಿಸಿದೆ.