BBL: ಸಿಂಗಲ್ ಬೇಡ ವಾಪಸ್ ಹೋಗು; ಬಾಬರ್ ಆಝಂಗೆ ಇದೆಂಥಾ ಅವಮಾನ! ವಿಡಿಯೋ

Updated on: Jan 16, 2026 | 8:42 PM

Babar Azam Humiliated by Steve Smith in BBL: ಇತ್ತೀಚೆಗೆ ಬಿಬಿಎಲ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಬಳಿಕ, ಇದೀಗ ಪಾಕ್ ಮಾಜಿ ನಾಯಕ ಬಾಬರ್ ಅಜಮ್ ಸಾರ್ವಜನಿಕ ಮುಜುಗರಕ್ಕೆ ಒಳಗಾಗಿದ್ದಾರೆ. ಸಿಡ್ನಿ ಸಿಕ್ಸರ್ಸ್ ಮತ್ತು ಸಿಡ್ನಿ ಥಂಡರ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್, ಬಾಬರ್ ಅಜಮ್‌ಗೆ ಸಿಂಗಲ್ ರನ್ ನಿರಾಕರಿಸಿದರು. ಪವರ್ ಸರ್ಜ್ ನಿಯಮದ ಲಾಭ ಪಡೆಯಲು ಸ್ಮಿತ್ ಈ ನಿರ್ಧಾರ ಕೈಗೊಂಡಿದ್ದರು. ಇದರಿಂದ ಬಾಬರ್ ಅಸಮಾಧಾನಗೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಕೆಲವೇ ಕೆಲವು ದಿನಗಳ ಹಿಂದೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ಅವರ ಆಮೆಗತಿಯ ಬ್ಯಾಟಿಂಗ್​ನಿಂದಾಗಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಇದು ಪಾಕ್ ನಾಯಕನಿಗೆ ಸಾರ್ವಕನಿಕವಾಗಿ ಸಾಕಷ್ಟು ಮುಜುಗರ ತಂದಿತ್ತು. ಇದೀಗ ಅದೇ ರೀತಿಯ ಅವಮಾನ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಬಾಬರ್ ಆಝಂ ಬ್ಯಾಟಿಂಗ್‌ ವಿಚಾರದಲ್ಲಿ ನಡೆದಿದೆ. ಬ್ಯಾಟಿಂಗ್‌ ವೇಳೆ ಹೆಚ್ಚು ಬಾಲ್​ಗಳನ್ನು ಡಾಟ್ ಮಾಡಿ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದ ಬಾಬರ್​ಗೆ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿ ಸ್ಟೀವ್ ಸ್ಮಿತ್ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಸ್ವತಃ ಬಾಬರ್ ಅವರೇ ತನಗಾದ ಅವಮಾನದಿಂದ ಮೈದಾನದಲ್ಲೇ ಅಸಮಾಧಾನಗೊಂಡ ಘಟನೆಯೂ ನಡೆದಿದೆ.

2025-26ರ ಬಿಗ್ ಬ್ಯಾಷ್ ಲೀಗ್‌ನ 37ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಮತ್ತು ಸಿಡ್ನಿ ಥಂಡರ್ ಮುಖಾಮುಖಿಯಾಗಿದ್ದವು. ಪಂದ್ಯದ ಸಮಯದಲ್ಲಿ, ಸ್ಟೀವ್ ಸ್ಮಿತ್ 11ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದರು. ಇದು ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ಕೆರಳಿಸಿತು. ಈ ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಸಿಡ್ನಿ ಸಿಕ್ಸರ್ಸ್ ತಂಡದ ಪರ ಸ್ಟೀವ್ ಸ್ಮಿತ್ ಸ್ಫೋಟಕವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಇತ್ತ ಇದಕ್ಕೆ ತದ್ವಿರುದ್ಧವಾಗಿ ಬಾಬರ್ ಅವರ ಸ್ಟ್ರೈಕ್ ರೇಟ್ ಅವರಿಗಿಂತ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆ ಓವರ್‌ನಲ್ಲಿ ಬಾಬರ್ ಸತತ ಮೂರು ಡಾಟ್ ಬಾಲ್‌ಗಳನ್ನು ಎದುರಿಸಿ, ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಸ್ಮಿತ್ ರನ್ ತೆಗೆದುಕೊಳ್ಳಲು ನಿರಾಕರಿಸಿದರು. ಇದು ಬಾಬರ್ ಅಸಮಾಧಾನಗೊಳ್ಳುವಂತೆ ಮಾಡಿತು.

ಸ್ಟೀವ್ ಸ್ಮಿತ್ ಅವರ ನಿರ್ಧಾರಕ್ಕೆ ಪವರ್ ಸರ್ಜ್ ನಿಯಮವೇ ಕಾರಣ. ಪವರ್ ಸರ್ಜ್ ಎಂಬುದು ಬಿಬಿಎಲ್‌ನಲ್ಲಿನ ನಿಯಮವಾಗಿದ್ದು, ಆರಂಭಿಕ ನಾಲ್ಕು ಓವರ್‌ಗಳ ಪವರ್‌ಪ್ಲೇ ನಂತರ, ಬ್ಯಾಟಿಂಗ್ ತಂಡವು ಇನ್ನಿಂಗ್ಸ್‌ನ 11 ನೇ ಓವರ್‌ನ ನಂತರ ಯಾವುದೇ ಸಮಯದಲ್ಲಿ ಮತ್ತೊಂದು ಎರಡು ಓವರ್‌ಗಳ ಪವರ್‌ಪ್ಲೇ ಅನ್ನು ಆಯ್ಕೆ ಮಾಡಬಹುದು. ಈ ನಿಯಮದ ಪ್ರಕಾರ ಕೇವಲ ಇಬ್ಬರು ಫೀಲ್ಡರ್‌ಗಳನ್ನು 30-ಗಜ ವೃತ್ತದ ಹೊರಗೆ ಇರಿಸಲಾಗುತ್ತದೆ. ಹೀಗಾಗಿ ಇದರ ಲಾಭ ಪಡೆಯಲು ಸ್ಟೀವ್ ಸ್ಮಿತ್ ಬಯಸಿದ್ದರು. ಅದರಂತೆ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಸ್ಮಿತ್ 30 ರನ್ ಗಳಿಸಿದರು. ಆದರೆ ಸ್ಮಿತ್ ಮಾಡಿದ್ದು ಮಾತ್ರ ಬಾಬರ್ ಅವರನ್ನು ಕೋಪಗೊಳಿಸಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 16, 2026 08:41 PM