ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಶನೇಶ್ವರ ದೇವಸ್ಥಾನದ ಅರ್ಚಕನಿಗೆ ಗಂಭೀರ ಗಾಯ

Updated on: Jul 11, 2026 | 5:38 PM

ಬೆಂಗಳೂರಿನ ಬಸವನಗುಡಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ಭಾರಿ ಗೇಟ್ ಮುರಿದುಬಿದ್ದಿದೆ. ದಾರಿಯಲ್ಲಿ ಹೋಗುತ್ತಿದ್ದ ಅರ್ಚಕ ಮಧು ಗಂಭೀರವಾಗಿ ಗಾಯಗೊಂಡಿದ್ದು, ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದೆ. ಸ್ಥಳೀಯರು ಮಧು ಅವರನ್ನು ರಕ್ಷಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದುರ್ಘಟನೆ ನಿರ್ಲಕ್ಷ್ಯದ ಫಲಿತಾಂಶವಾಗಿದ್ದು, ತನಿಖೆ ಅಗತ್ಯವಿದೆ.

ಬೆಂಗಳೂರು, ಜು.11: ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿಯಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾರಿ ಗಾತ್ರದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ಮುರಿದುಬಿದ್ದ ಪರಿಣಾಮ, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶನೇಶ್ವರ ದೇವಸ್ಥಾನದ ಅರ್ಚಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವನಗುಡಿಯ ಬೃಂದಾವನ ನಗರದಲ್ಲಿ ಇಂದು (ಜು.11) ಮಧ್ಯಾಹ್ನ ಸುಮಾರು 1:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಅರ್ಚಕರನ್ನು ಮಧು ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಅರ್ಚಕ ಮಧು ಅವರು ಮಧ್ಯಾಹ್ನದ ವೇಳೆ ಬೃಂದಾವನ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಬೃಹತ್ ಕಬ್ಬಿಣದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ದಿಢೀರನೆ ಕಟ್ ಆಗಿದೆ. ಈ ಭಾರಿ ತೂಕದ ಕಬ್ಬಿಣದ ಗೇಟ್ ನೇರವಾಗಿ ನಡೆದು ಹೋಗುತ್ತಿದ್ದ ಮಧು ಅವರ ಮೇಲೆಯೇ ಮುರಿದುಬಿದ್ದಿದೆ ಗೇಟ್‌ನ ಅಡಿಯಲ್ಲೇ ಕೆಲ ಹೊತ್ತು ಒದ್ದಾಡಿದ್ದಾರೆ. ಗೇಟ್ ಬಿದ್ದ ತಕ್ಷಣ ಜೋರಾದ ಶಬ್ದ ಕೇಳಿ ಧಾವಿಸಿ ಬಂದ ಸ್ಥಳೀಯರು ಭಾರಿ ಗಾತ್ರದ ಕಬ್ಬಿಣದ ಗೇಟನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳೀಯರು ತಕ್ಷಣವೇ ಗೇಟ್ ತಗೆದು ಮಧು ಅವರನ್ನು ಹೊರಗೆಳೆದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಭಾರಿ ತೂಕದ ಗೇಟ್ ಬೆನ್ನಿನ ಮೇಲೆ ಬಿದ್ದ ರಭಸಕ್ಕೆ ಮಧು ಅವರ ಬೆನ್ನುಮೂಳೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳು ಅರ್ಚಕನನ್ನು ತಕ್ಷಣವೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 11, 2026 05:34 PM
Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More