SMAT 2024: 6,6,6,6,4… ಸಿಎಸ್‌ಕೆ ಬೌಲರ್ ಎದುರು ಅಬ್ಬರಿಸಿದ ಹಾರ್ದಿಕ್; ವಿಡಿಯೋ
Hardik Pandya: ಬರೋಡಾದ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸಿಎಸ್‌ಕೆಯ ಹೊಸ ಬೌಲರ್ ಗುರ್ಜಪ್ನೀತ್ ಸಿಂಗ್ ಅವರನ್ನು ಎದುರಿಸಿದರು. ಗುರ್ಜಪ್ನೀತ್ ಸಿಂಗ್ ಅವರ ಓವರ್‌ನ ಮೊದಲ 3 ಎಸೆತಗಳಲ್ಲಿ ಪಾಂಡ್ಯ 3 ಸಿಕ್ಸರ್‌ಗಳನ್ನು ಬಾರಿಸಿದರು. ಇದಾದ ನಂತರ ಗುರ್ಜಪ್ನೀತ್ ಸಿಂಗ್ ನೋ ಬಾಲ್ ಬೌಲ್ ಮಾಡಿದರು. ನಂತರ ಪಾಂಡ್ಯ, ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಮತ್ತು ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂದು ಬರೋಡಾ ಮತ್ತು ತಮಿಳುನಾಡು ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಬರೋಡಾ ತಂಡ ರೋಚಕ ಜಯ ಸಾಧಿಸಿತು. ತಂಡದ ಈ ಗೆಲುವಿನಲ್ಲಿ ಆಲ್ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಅವರು, ಇತ್ತೀಚೆಗಷ್ಟೇ ನಡೆದ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ತಂಡವನ್ನು ಸೇರಿಕೊಂಡಿರುವ ಯುವ ವೇಗಿ ಗುರ್ಜಪನೀತ್ ಸಿಂಗ್ ಎಸೆದ 17ನೇ ಓವರ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದು ಬರೋಬ್ಬರಿ 30 ರನ್ ಕಲೆಹಾಕಿದರು.
ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್
ಉಭಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬರೋಡಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ತಮಿಳುನಾಡು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬರೋಡಾ ತಂಡ ಪಂದ್ಯದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ 222 ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಹಾರ್ದಿಕ್ ಪಾಂಡ್ಯ ಬರೋಡಾ ಗೆಲುವಿನ ಹೀರೋ ಆಗಿದ್ದರು. ಪಾಂಡ್ಯ ಕೇವಲ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 69 ರನ್ ಗಳಿಸಿದರು.
ಬರೋಡಾದ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸಿಎಸ್‌ಕೆಯ ಹೊಸ ಬೌಲರ್ ಗುರ್ಜಪ್ನೀತ್ ಸಿಂಗ್ ಅವರನ್ನು ಎದುರಿಸಿದರು. ಗುರ್ಜಪ್ನೀತ್ ಸಿಂಗ್ ಅವರ ಓವರ್‌ನ ಮೊದಲ 3 ಎಸೆತಗಳಲ್ಲಿ ಪಾಂಡ್ಯ 3 ಸಿಕ್ಸರ್‌ಗಳನ್ನು ಬಾರಿಸಿದರು. ಇದಾದ ನಂತರ ಗುರ್ಜಪ್ನೀತ್ ಸಿಂಗ್ ನೋ ಬಾಲ್ ಬೌಲ್ ಮಾಡಿದರು. ನಂತರ ಪಾಂಡ್ಯ, ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಮತ್ತು ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಅದೇ ಸಮಯದಲ್ಲಿ, ಓವರ್‌ನ ಕೊನೆಯ ಎಸೆತದಲ್ಲಿ 1 ರನ್ ಗಳಿಸಲಾಯಿತು. ಈ ಮೂಲಕ ಗುರ್ಜಪ್ನೀತ್ ಸಿಂಗ್ ಅವರ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಒಟ್ಟು 29 ರನ್ ಗಳಿಸಿದರು ಮತ್ತು 1 ರನ್ ನೋ ಬಾಲ್‌ನಿಂದ ಬಂದಿತು. ಅಂದರೆ ಗುರ್ಜಪ್ನೀತ್ ಈ ಓವರ್‌ನಲ್ಲಿ ಒಟ್ಟು 30 ರನ್ ಬಿಟ್ಟುಕೊಟ್ಟರು.
ಗುರ್ಜಪ್ನೀತ್ ಸಿಂಗ್ ಯಾರು?
26 ವರ್ಷದ ಎಡಗೈ ಸೀಮರ್ ಗುರ್ಜಪನೀತ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ಪರ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ 30 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಗುರ್ಜಪನೀತ್ರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಭಾರಿ ಪೈಪೋಟಿ ನಡೆಯಿತು. ಅಂತಿಮವಾಗಿ ಸಿಎಸ್‌ಕೆ 2.20 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ