ಬೆಳಗಾವಿ: ಹೆಂಡ್ತಿ ಜತೆ ಚಕ್ಕಂದ ಆಡಿದವನಿಗೆ ಚಟ್ಟ ಕಟ್ಟಿದ ಗಂಡ, ಮೃತನ ಸಂಬಂಧಿಕರು ಹೇಳೋದೇನು ನೋಡಿ

Edited By:

Updated on: Sep 18, 2025 | 12:58 PM

ಅನೈತಿಕ ಸಂಬಂಧವೊಂದು ಕೊಲೆಯಲ್ಲಿ ಪರ್ಯಾವಸಾನವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ನಡೆದಿದೆ. ಸದ್ಯ, ಮೃತನ ಕುಟುಂಬಸ್ಥರು ಅನೈತಿಕ ಸಂಬಂಧದ ಆರೋಪವನ್ನು ಒಪ್ಪಿಕೊಂಡಿದ್ದು, ಆದರೆ ಒಂದು ವರ್ಷದ ಹಿಂದೆಯೇ ಆತ ತಪ್ಪನ್ನು ತಿದ್ದಿಕೊಂಡು ಬಾಳುತ್ತಿದ್ದ ಎಂದು ತಿಳಿಸಿದ್ದಾರೆ. ಘಟನೆಯ ವಿವರವುಳ್ಳ ವಿಡಿಯೋ ಇಲ್ಲಿದೆ.

ಬೆಳಗಾವಿ, ಸೆಪ್ಟೆಂಬರ್ 18: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಯುವಕನೊಬ್ಬನ ಬರ್ಬರ ಕೊಲೆಯಾಗಿದೆ. ಆರೋಪಿಯ ಪತ್ನಿಯ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಕ್ಕೆ ಈ ಕೊಲೆಯಾಗಿದೆ ಎನ್ನಲಾಗುತ್ತಿದೆ. ಈ ವಿಚಾರವನ್ನು ಮೃತನ ಸಂಬಂಧಿಕರೂ ದೃಢಪಡಿಸಿದ್ದಾರೆ. ಕೊಲೆಯಾದ ಮಹಾಂತೇಶ್ ಮತ್ತು ಆರೋಪಿ ಬಸವರಾಜ್ ಬುಕನಟ್ಟಿ ಪತ್ನಿ ನಡುವೆ ಅನೈತಿಕ ಸಂಬಂಧ ಇತ್ತು. ಒಂದು ವರ್ಷದ ಹಿಂದೆ ಇದೇ ವಿಚಾರಕ್ಕೆ ಎಫ್ಐಆರ್ ಆಗಿ ಬಳಿಕ ಪಂಚರ ಸಮ್ಮುಖದಲ್ಲಿ ರಾಜಿ ಸಂಧಾನ ನೆರವೇರಿಸಲಾಗಿತ್ತು. ಅದಾದ ನಂತರ ಆತ ತಪ್ಪನ್ನು ತಿದ್ದಿಕೊಂಡು ತನ್ನಷ್ಟಕ್ಕೇ ಇದ್ದ. ಆದರೂ ಕೊಲೆ ಮಾಡಲಾಗಿದೆ ಎಂದು ಮಹಾಂತೇಶ್​ನ ಸಹೋದರ ಸೋಮೇಶ್ ಸಿದ್ದಪ್ಪ ಆರೋಪಿಸಿದ್ದಾರೆ.

ಹಳೆಯ ಸೇಡಿನಲ್ಲಿ ಮಹಾಂತೇಶನನ್ನು ಬುಧವಾರ ಸಂಚು ಹೂಡಿ ಬಸವರಾಜ್ ಕೊಲೆ ಮಾಡಿದ್ದಾನೆ. ಮೂರ್ನಾಲ್ಕು ಜನರು ಒಟ್ಟಾಗಿ ಆತನ ಕೊಲೆ ಮಾಡಿದ್ದಾರೆ. ಮಹಾಂತೇಶ ಬರುವುದನ್ನು ಪೊದೆಯಲ್ಲಿ ಅಡಗಿ ಕುಳಿತು ಬಳಿಕ ದಾಳಿ ಮಾಡಿದ್ದಾರೆ. ಆತ ಬಸ್ ಇಳಿದು ಮನೆಯತ್ತ ನಡೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿದೆ. ಬಳಿಕ ಆತನನ್ನು ಹಿಂಬಾಲಿಸಿಕೊಂಡು ಓರ್ವ ಯುವಕ ಹೋಗಿದ್ದಾನೆ. ಬಳಿಕ ಬಸವರಾಜ್​​ಗೆ ಮಾಹಿತಿ ಕೊಟ್ಟು ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಶವಾಗರದಲ್ಲಿ ಮಹಾಂತೇಶ್ ಮೃತದೇಹ ಇರಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ