ಬೇಲೂರಿನಲ್ಲಿ ಪ್ರಕೃತಿ ವಿಸ್ಮಯ: ಚನ್ನಕೇಶವನ ಪಾದ ಸೋಕಿದ ಸೂರ್ಯರಶ್ಮಿ! ವರ್ಷಕ್ಕೊಮ್ಮೆ ನಡೆಯುವ ಅಪರೂಪದ ವಿದ್ಯಮಾನಕ್ಕೆ ಭಕ್ತರು ಫಿದಾ
ಹಾಸನದ ಬೇಲೂರಿನ ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ 'ಕಿರಣಾಭಿಷೇಕ' ನಡೆಯಿತು. ಹೊಯ್ಸಳ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾದ ಈ ದೇಗುಲದಲ್ಲಿ ಪ್ರತಿ ವರ್ಷ ಏಪ್ರಿಲ್ 21 ಅಥವಾ 22 ರಂದು ಸೂರ್ಯನ ಕಿರಣಗಳು ನೇರವಾಗಿ ಗರ್ಭಗುಡಿಯಲ್ಲಿರುವ ಮೂಲ ವಿಗ್ರಹವನ್ನು ಸ್ಪರ್ಶಿಸುತ್ತವೆ. ಇದು ಹೊಯ್ಸಳ ಶಿಲ್ಪಿಗಳ ಅದ್ಭುತ ಗಣಿತ ಶಾಸ್ತ್ರ ಮತ್ತು ಖಗೋಳ ಜ್ಞಾನಕ್ಕೆ ಕನ್ನಡಿ ಹಿಡಿದಿದೆ, ನೂರಾರು ಭಕ್ತರು ಈ ವಿಸ್ಮಯಕ್ಕೆ ಸಾಕ್ಷಿಯಾದರು.
ಹಾಸನ, ಏ.22 : ವಿಶ್ವವಿಖ್ಯಾತ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ಅಪರೂಪದ ಪ್ರಕೃತಿ ವಿಸ್ಮಯವೊಂದು ಸಂಭವಿಸಿದೆ. ಪ್ರತಿವರ್ಷದಂತೆ ಈ ಬಾರಿಯೂ ಸೂರ್ಯನ ಕಿರಣಗಳು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ, ಚನ್ನಕೇಶವಸ್ವಾಮಿಯ ಮೂಲ ವಿಗ್ರಹಕ್ಕೆ ‘ಕಿರಣಾಭಿಷೇಕ’ ಮಾಡಿವೆ. ಹೊಯ್ಸಳರ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿರುವ ಈ ದೇಗುಲದಲ್ಲಿ ಪ್ರತಿವರ್ಷ ಏಪ್ರಿಲ್ 21 ಅಥವಾ 22ರಂದು ಈ ವಿಶೇಷ ವಿದ್ಯಮಾನ ಘಟಿಸುತ್ತದೆ. ಇಂದು ಮುಂಜಾನೆ ಸೂರ್ಯೋದಯದ ವೇಳೆಗೆ ಭಕ್ತರು ಈ ಮನೋಹರ ದೃಶ್ಯಕ್ಕೆ ಸಾಕ್ಷಿಯಾದರು. ಮುಂಜಾನೆ ಸರಿಯಾಗಿ 6 ಗಂಟೆ 15 ನಿಮಿಷಕ್ಕೆ ಸೂರ್ಯನ ರಶ್ಮಿಗಳು ದೇಗುಲದ ಮುಖ್ಯ ದ್ವಾರದ ಮೂಲಕ ಗರ್ಭಗುಡಿಯನ್ನು ಪ್ರವೇಶಿಸಿದವು. ನಂತರ ನವರಂಗ ದ್ವಾರವನ್ನು ದಾಟಿದ ಸೂರ್ಯ ಕಿರಣಗಳು ನೇರವಾಗಿ ಶ್ರೀ ಚನ್ನಕೇಶವಸ್ವಾಮಿಯ ಮೂಲ ವಿಗ್ರಹವನ್ನು ಸ್ಪರ್ಶಿಸಿದವು. ಇಲ್ಲಿ ಮತ್ತೊಂದು ವಿಶೇಷವೆಂದರೆ, ಬೇಲೂರಿನ ಪ್ರಸಿದ್ಧ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಮುಗಿದ ನಂತರವೇ ಈ ಸೂರ್ಯ ಕಿರಣಗಳ ಪ್ರವೇಶವಾಗುತ್ತದೆ. ಹೊಯ್ಸಳ ಶಿಲ್ಪಿಗಳ ಅದ್ಭುತ ಗಣಿತ ಶಾಸ್ತ್ರ ಮತ್ತು ಖಗೋಳ ಜ್ಞಾನಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ಸೂರ್ಯ ಕಿರಣದ ಅಭಿಷೇಕವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ದೇಗುಲದ ಆವರಣದಲ್ಲಿ ಜಮಾಯಿಸಿದ್ದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ