ಪತ್ನಿಯ ಕೊಂದು ಅಪಘಾತದ ನಾಟಕವಾಡಿದ ಪತಿಯ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸರು
ಬೆಂಗಳೂರಿನಲ್ಲಿ ಪತ್ನಿ ಗಾಯತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಅನಂತ್‌ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. 55 ವರ್ಷದ ದೈಹಿಕ ಶಿಕ್ಷಕಿಯಾಗಿದ್ದ ಗಾಯತ್ರಿಯನ್ನು ಅನಂತ್ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ. ಆದರೆ, ಗಾಯದ ಗುರುತುಗಳಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿ, ಕೊಲೆಯ ರಹಸ್ಯ ಭೇದಿಸಿದ್ದಾರೆ.
ಬೆಂಗಳೂರು, ಡಿ.23: ಪತ್ನಿಗೆ ಅಪಘಾತ ಆಗಿದೆ ಎಂದು ಕೊಲೆ ಮಾಡಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇದೀಗ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಫೋಟಕ ಮಾಹಿತಿ ನೀಡಿದ್ದಾರೆ,. ಗಾಯತ್ರಿ ಎಂಬುವವರನ್ನು ಕೊಲೆ ಮಾಡಿದ ಆರೋಪದಲ್ಲಿ ಪತಿ ಅನಂತ್ ಅವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. 55 ವರ್ಷದ ದೈಹಿಕ ಶಿಕ್ಷಕಿಯಾಗಿದ್ದ ಗಾಯತ್ರಿ ಅವರನ್ನು ಪತಿ ಅನಂತ್ ಸಿನಿಮೀಯ ಶೈಲಿಯಲ್ಲಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಮಿಟ್ಟಗಾನಹಳ್ಳಿ ಗ್ರಾಮದ ಬಳಿ ಸೈಟ್ ನೋಡಲು ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಅನಂತ್ ಅವರು, ಅಲ್ಲಿ ಆಕೆಯನ್ನು ಕುತ್ತಿಗೆ ಹಿಸುಕಿ, ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಬಳಿಕ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಬುಲೆಟ್ ಬೈಕ್‌ನಿಂದ ಅಪಘಾತವಾಗಿದೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದರೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮೇಲೆ ಅನುಮಾನಾಸ್ಪದ ಗಾಯಗಳನ್ನು ಕಂಡು ಪೊಲೀಸರು, ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಿದರು. ತನಿಖೆ ನಡೆಸಿದ ಬಾಗಲೂರು ಪೊಲೀಸರು ಆರೋಪಿ ಅನಂತ್‌ನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ದಂಪತಿಗಳ ನಡುವೆ ಮದುವೆಯಾದಾಗಿನಿಂದಲೂ ಮನಸ್ತಾಪವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ದಂಪತಿಗಳಾದ ಅನಂತ್ ಮತ್ತು ಗಾಯತ್ರಿ ಅವರಿಗೆ ಸುಮಾರು 22 ವರ್ಷಗಳ ಹಿಂದೆ ಮದುವೆಯಾಗಿದ್ದು, 17 ವರ್ಷದ ಮಗಳೂ ಇದ್ದಾಳೆ. ಮದುವೆಯಾದಾಗಿನಿಂದಲೂ ಇವರಿಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪಗಳಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಇವರು ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ ನಂತರ ರಾಜಿಯಾಗಿ ಅರ್ಜಿಯನ್ನು ವಾಪಸ್ ಪಡೆದಿದ್ದರು ಎಂದು ಹೇಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
