ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ವಿಜಯಲಕ್ಷ್ಮಿ ದರ್ಶನ್ ಅವರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ತಮ್ಮ ಕೇಸ್ ಬಗ್ಗೆ ವಿಚಾರಿಸಿದ್ದಾರೆ. ಯಾರನ್ನೂ ಈವರೆಗೆ ಬಂಧಿಸಿಲ್ಲ ಎಂಬುದು ತಿಳಿದು ವಿಜಯಲಕ್ಷ್ಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಮಾತಿಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್ ಮಾಡಿದವರ ವಿರುದ್ಧ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ ಅವರು ದೂರು ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ಕ್ರಮ ತೆಗೆದಕೊಂಡಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ಆರೋಪಿಸಿದ್ದರು. ತಮ್ಮ ದೂರನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದರು. ಅದಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಪ್ರಕಾರ, ವಿಜಯಲಕ್ಷ್ಮಿ ಅವರ ಆರೋಪ ಸುಳ್ಳು. ಎಲ್ಲರಿಗೋಸ್ಕರ ನಾವು ಪೊಲೀಸರು ಇದ್ದೇವೆ. ಯಾವುದೇ ಒಂದು ವರ್ಗಕ್ಕಾಗಿ ಅಲ್ಲ. ನಾವು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಕೂಡ ನಮ್ಮವರು ತಕ್ಷಣ ಕೇಸ್ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಹಂತದಲ್ಲಿ ಮಾಡಿದ್ದೇವೆ. ಡಿಸಿಪಿ ಹಂತದಲ್ಲಿ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ತಕ್ಷಣಕ್ಕೆ ಸುಳಿವು ಸಿಗುತ್ತದೆ. ಕೆಲವೊಮ್ಮ ವಿಳಂಬ ಆಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶ ಇಲ್ಲ. ಯಾವುದೇ ಕೇಸ್ನಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದರೆ ಅಂಥ ಅಧಿಕಾರಿಗಳ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಸೀಮಂತ್ ಕುಮಾರ್ (Seemanth Kumar Singh) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
