ಬೆಂಗಳೂರು ದರೋಡೆ: ಪಾಳು ಬಿದ್ದ ಮನೆಯಲ್ಲಿ ಕೋಟಿ ಕೋಟಿ ರೂ. ಬಚ್ಚಿಟ್ಟಿದ್ದ ಕ್ರಿಮಿನಲ್​ಗಳು!

Edited By:

Updated on: Nov 24, 2025 | 9:39 AM

ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂಪಾಯಿ ಮೌಲ್ಯದ ಎಟಿಎಂ ಹಣದ ವ್ಯಾನ್ ದರೋಡೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಸಾಲ ಮತ್ತು ಜೂಜಿನ ಚಟದಿಂದ ದರೋಡೆ ನಡೆಸಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ದರೋಡೆಕೋರರಾದ ರವಿ, ರಾಕೇಶ್, ನೆಲ್ಸನ್, ನವೀನ್, ಗ್ಸೇವಿಯರ್ ಸೇರಿ ಏಳು ಮಂದಿಯನ್ನು ಬಂಧಿಸಿ 6.3 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ನವೆಂಬರ್ 24: ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ 7.11 ಕೋಟಿ ರೂಪಾಯಿ ಎಟಿಎಂ ಹಣದ ವ್ಯಾನ್ ದರೋಡೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಲಾಲ್ ಬಾಗ್ ಸಿದ್ದಾಪುರ ಬಳಿ ಆರ್​ಬಿಐ ಅಧಿಕಾರಿಗಳ ಸೋಗಿನಲ್ಲಿ ನಡೆದಿದ್ದ ಈ ದರೋಡೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರ ತನಿಖೆ ವೇಳೆ, ದರೋಡೆಕೋರರು ಸಾಲ ಮತ್ತು ಜೂಜಿನ ಚಟಕ್ಕೆ ಬಿದ್ದು ಈ ಕೃತ್ಯ ಎಸಗಿರುವುದು ಬಯಲಾಗಿದೆ. ಪಾಳು ಬಿದ್ದ ಮನೆಯಲ್ಲಿ ಕೋಟಿ ಕೋಟಿ ರೂ. ಬಚ್ಚಿಟ್ಟಿದ್ದುದೂ ಬೆಳಕಿಗೆ ಬಂದಿದೆ. ಪ್ರಕರಣದ ಮಾಸ್ಟರ್ ಮೈಂಡ್ ಕ್ಸೇವಿಯರ್ ಸೇರಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಬಂಧಿತ ಮೂವರಿಂದ 53 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 6.3 ಕೋಟಿ ರೂಪಾಯಿ ವಸೂಲಿಯಾಗಿದೆ. ಚಿತ್ತೂರಿನಲ್ಲಿ ಪತ್ತೆಯಾದ ಇನೋವಾ ಕಾರಿನ ಜಿಪಿಎಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕೇರಳ, ತಮಿಳುನಾಡು, ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದವರನ್ನು ಬಂಧಿಸಲಾಗಿದೆ. ದರೋಡೆಕೋರರೊಂದಿಗೆ ಕೈಜೋಡಿಸಿದ್ದ ಗೋವಿಂದಪುರ ಠಾಣೆಯ ಕಾನ್ಸ್ಟೆಬಲ್ ಅಣ್ಣಪ್ಪ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ