ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ: ವಾಹನ ಸವಾರರ ಪರದಾಟ

Updated on: Jan 11, 2026 | 5:47 PM

ಬೆಂಗಳೂರಿನ ರಾಜಾಜಿನಗರದ ಸುಜಾತಾ ಅಂಡರ್‌ಪಾಸ್‌ನಲ್ಲಿ ನಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಬಿಎ ನಡೆಸಿದ ಡಾಂಬರೀಕರಣದಲ್ಲಿ ಡ್ರೈನ್ ಕವರ್‌ಗಳನ್ನು ಮುಚ್ಚಲಾಗಿದೆ. ಇದು ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದು, ಮಳೆಯಾದಾಗ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ವಾಹನ ಸವಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸುವಂತೆ ಜನರು ಆಗ್ರಹಿಸಿದ್ದಾರೆ.

ಬೆಂಗಳೂರು, ಜ.11:  ರಾಜಾಜಿನಗರದ ಸುಜಾತಾ ಅಂಡರ್‌ಪಾಸ್‌ನಲ್ಲಿ ಜಿಬಿಎ ನಡೆಸಿದ ಅವೈಜ್ಞಾನಿಕ ರಸ್ತೆ ಡಾಂಬರೀಕರಣವು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಗಡಿಬಿಡಿಯಲ್ಲಿ ಡ್ರೈನ್ ಕವರ್‌ಗಳ ಮೇಲೆಯೇ ಡಾಂಬರ್ ಹಾಕಲಾಗಿದೆ. ಇದರಿಂದ ಡ್ರೈನ್ ಕವರ್‌ಗಳ ಬಳಿ ವಾಹನಗಳು ಕುಸಿಯುತ್ತಿದ್ದು, ಸವಾರರು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಿಗಿದು ಬೀಳುವ ಅಪಾಯವನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಅಂಡರ್‌ಪಾಸ್‌ನಲ್ಲಿ ನೀರು ಸರಾಗವಾಗಿ ಹರಿಯಲು ನಿರ್ಮಿಸಲಾಗಿದ್ದ ಗ್ಯಾಲರಿಗಳನ್ನು ಸಂಪೂರ್ಣವಾಗಿ ಟಾರ್ ಹಾಕಿ ಮುಚ್ಚಲಾಗಿದೆ. ಮುಂಬರುವ ಮಳೆಗಾಲದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ನೀರು ಹರಿಯಲು ಅಡ್ಡಿಯಾಗಿ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಸಮಸ್ಯೆ ಉಂಟಾಗಲಿದೆ. ಇದರಿಂದ ವಾಹನಗಳು ಸ್ಕಿಡ್ ಆಗಿ ಅಪಘಾತಗಳಾಗುವ ಸಾಧ್ಯತೆಯಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ, ಮುಚ್ಚಿರುವ ಗ್ಯಾಲರಿಗಳನ್ನು ಸರಿಪಡಿಸಿ, ಡ್ರೈನ್ ಕವರ್‌ಗಳಿಂದ ಟಾರ್ ತೆಗೆಯಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ