ಅಯ್ಯೋ ಪಾಪ.. ಚೆಂಡು ಬಡಿದು ಮೈದಾನದಲ್ಲೇ ಒದ್ದಾಡಿ ಪ್ರಾಣ ಚೆಲ್ಲಿದ ಪಕ್ಷಿ

|

Updated on: Jan 09, 2025 | 9:01 PM

BBL Tragic Accident: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಭೀಕರ ಅವಘಡ ಸಂಭವಿಸಿದೆ. ಸಿಡ್ನಿ ಸಿಕ್ಸರ್ಸ್ ಆಟಗಾರ ಜೇಮ್ಸ್ ವಿನ್ಸ್ ಹೊಡೆದ ಚೆಂಡು ನೇರವಾಗಿ ಪಕ್ಷಿಯ ಮೇಲೆ ಬಿದ್ದ ಕಾರಣ ಆ ಪಕ್ಷಿ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಯಲ್ಲಿ ಆಟಗಾರನ ತಪ್ಪಲ್ಲದಿದ್ದರೂ, ಅಮಾಯಕ ಜೀವಿವೊಂದು ಪ್ರಾಣ ಕಳೆದುಕೊಂಡಿದ್ದು ಕ್ರೀಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಕ್ರಿಕೆಟ್ ಆಗಿರಲಿ ಅಥವಾ ಇನ್ನಾವುದೇ ಆಟವಿರಲಿ, ಆಟದ ವೇಳೆ  ಆಟಗಾರರು ಸಣ್ಣ ಪುಟ್ಟ ಗಾಯಗಳಿಗೆ ತುತ್ತಾಗುವುದು ಸಹಜ. ಕೆಲವೊಮ್ಮೆ ಗಾಯ ಗಂಭೀರವಾಗಿದ್ದು ಉಂಟು, ಇನ್ನು ಕೆಲವೊಮ್ಮೆ ಆಟಗಾರರು ಮೈದಾನದಲ್ಲೇ ಉಸಿರು ಚೆಲ್ಲಿದ್ದು ಉಂಟು. ಆದರೆ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅವಘಡವೊಂದು ಸಂಭವಿಸಿದ್ದು, ಏನೂ ತಪ್ಪು ಮಾಡದ ಅಮಾಯಕ ಜೀವವೊಂದು ಮೈದಾನದಲ್ಲೇ ನರಳಾಡಿ ಪ್ರಾಣ ಬಿಟ್ಟಿದೆ. ವಾಸ್ತವವಾಗಿ ಈ ಇಡೀ ಘಟನೆಯಲ್ಲಿ ಯಾರ ತಪ್ಪು ಇಲ್ಲದಿದ್ದರೂ, ಆಕಸ್ಮಿಕವಾಗಿ ಜರುಗಿ ಹೋದ ಈ ಅವಘಡದಿಂದ ಪಕ್ಷಿಯೊಂದು ನೋವಿನಿಂದ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದೆ.

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇಂದು ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ನಡೆದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಂಡದ ಬ್ಯಾಟ್ಸ್‌ಮನ್ ಜೇಮ್ಸ್ ವಿನ್ಸ್ ಹೊಡೆದ ಹೊಡೆತವೊಂದು ಪಕ್ಷಿಯ ಪ್ರಾಣವನ್ನು ಬಲಿಪಡೆದಿದೆ. ಮೆಲ್ಬೋರ್ನ್ ಸ್ಟಾರ್ಸ್ ನೀಡಿದ 157 ರನ್‌ಗಳ ಗುರಿ ಬೆನ್ನತ್ತಿದ ಸಿಡ್ನಿ ತಂಡದ ಪರ ವಿನ್ಸ್ ಬ್ಯಾಟಿಂಗ್‌ ಮಾಡುತ್ತಿದ್ದರು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಎಡಗೈ ವೇಗದ ಬೌಲರ್ ಜೋಯಲ್ ಪ್ಯಾರಿಸ್ ಬೌಲಿಂಗ್ ಮಾಡುತ್ತಿದ್ದು, ಅದೇ ಓವರ್‌ನ ಐದನೇ ಎಸೆತದಲ್ಲಿ ಈ ಅವಘಡ ಸಂಭವಿಸಿದೆ.

ನೇರವಾಗಿ ಹಕ್ಕಿಗೆ ಬಡಿದ ಚೆಂಡು

ಜೋಯಲ್ ಪ್ಯಾರಿಸ್ ಎಸೆದ ಓವರ್​ನ ಐದನೇ ಎಸೆತವನ್ನು ವಿನ್ಸ್ ನೇರ ಬೌಂಡರಿ ಕಡೆಗೆ ಆಡಿದರು. ದುರಾದೃಷ್ಟವೆಂಬಂತೆ ಅಲ್ಲಿಯೇ ಸೀಗಲ್ ಪಕ್ಷಿಗಳ ದೊಡ್ಡ ಹಿಂಡಿತ್ತು. ಸ್ವಲ್ಪ ಸಮಯ ಗಾಳಿಯಲ್ಲಿದ್ದ ಚೆಂಡು, ಆ ಬಳಿಕ ನೇರವಾಗಿ ಅಲ್ಲಿ ಕುಳಿತಿದ್ದ ಒಂದು ಪಕ್ಷಿಯ ಮೇಲೆ ಬಿದ್ದಿತು. ಚೆಂಡು ಪಕ್ಷಿಗೆ ಬಡಿದ ತಕ್ಷಣ, ಅದರ ಗರಿಗಳು ತುಂಡುಗಳಾಗಿ ಹಾರಿ ನೆಲದ ಮೇಲೆ ಚದುರಿಹೋದವು. ಇದರಿಂದಾಗಿ ಪಕ್ಷಿ ಮೈದಾನದಲ್ಲೇ ಬಿದ್ದು ಒದ್ದಾಡಲಾರಂಭಿಸಿತು. ಇತ್ತ ಉಳಿದ ಪಕ್ಷಿಗಳ ಹಿಂಡುಗಳು ಗಾಳಿಯಲ್ಲಿ ಹಾರಿದವು. ಈ ದೃಶ್ಯವನ್ನು ನೋಡಿದ ತಕ್ಷಣ ಜೇಮ್ಸ್ ವಿನ್ಸ್ ಅವರ ಮುಖದಲ್ಲಿ ಗಾಬರಿ ಮನೆ ಮಾಡಿತು. ಅವರ ಜತೆಗೆ ವೀಕ್ಷಕರು, ಕಾಮೆಂಟೇಟರ್​ಗಳು ಕೂಡ ಬೆಚ್ಚಿಬಿದ್ದರು. ಮಾಹಿತಿ ಪ್ರಕಾರ, ಆ ಪಕ್ಷಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ಈ ರೀತಿಯ ಘಟನೆ ಇದೇ ಮೊದಲಲ್ಲ

ಬಾಲ್‌ ತಗುಲಿ ಹಕ್ಕಿ ಗಾಯಗೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ದುರ್ಘಟನೆಗಳು ನಡೆದಿವೆ. ವಾಸ್ತವವಾಗಿ, ಡಿಸೆಂಬರ್-ಜನವರಿ ತಿಂಗಳುಗಳಲ್ಲಿ, ಸೀಗಲ್ ಪಕ್ಷಿಗಳ ಹಿಂಡುಗಳು ಆಸ್ಟ್ರೇಲಿಯಾದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುತ್ತವೆ. ಅಂತಹ ಸಂದರ್ಭಗಳಲ್ಲಿ, ಕೆಲವೊಮ್ಮೆ ಅದರ ಹಿಂಡುಗಳು ಮೆಲ್ಬೋರ್ನ್ ಮತ್ತು ಇತರ ಕೆಲವು ಬಯಲು ಪ್ರದೇಶಗಳಲ್ಲಿ ನೆಲೆಯೂರುತ್ತವೆ. ಈ ಕಾರಣದಿಂದಾಗಿ, ಇಂತಹ ಅವಘಡಗಳು ಹಾಗಾಗ ಸಂಭವಿಸುತ್ತವೆ. ಇದೀಗ ಈ ಪಂದ್ಯದಲ್ಲೂ ಅಂಥದ್ದೇ ಘಟನೆ ನಡೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 09, 2025 07:04 PM