ಚನ್ನಪಟ್ಟಣ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ? ಬಿಜೆಪಿಯ ಒಲವು ಸಿಪಿ ಯೋಗೇಶ್ವರ್ ಮೇಲೆ!
ಯೋಗೇಶ್ವರ್ ಅವರೇ ಚನ್ನಪಟ್ಟಣದಿಂದ ಸ್ಪರ್ಧಿಸಲಿ ಅನ್ನೋದು ವಿಜಯೇಂದ್ರರ ಇಂಗಿತವಾಗಿರುವುದು ಅವರ ಮಾತಿನಿಂದ ಸ್ಪಷ್ಟವಾಗುತ್ತದೆ. ಯೋಗೇಶ್ವರ್ ಕ್ಷೇತ್ರದ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ, ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲಿಗರಿದ್ದಾರೆ ಎಂದು ವಿಜಯೇಂದ್ರ ಹೇಳುವ ಮಾತಿನ ಹಿಂದಿರುವ ಮರ್ಮ ಅರ್ಥಮಾಡಿಕೊಳ್ಳಬಹುದು.
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಎರಡು ಪಕ್ಷಗಳ ದೋಸ್ತಿಯ ನಡುವೆ ಬಿರುಕು ಮೂಡಿಸಿದರೆ ಅಚ್ಚರಿಪಡಬೇಕಿಲ್ಲ ಮಾರಾಯ್ರೇ. ಬಿಜೆಪಿಯ ಸಿಪಿ ಯೋಗೇಶ್ವರ್ ತಾನೇ ಅಭ್ಯರ್ಥಿ ಅಂತ ಹೇಳಿಕೊಳ್ಳುತ್ತಿದ್ದಾರೆ ಆದರೆ ಇದೇ ಕ್ಷೇತ್ರದಿಂದ ಅಸೆಂಬ್ಲಿಗೆ ಆಯ್ಕೆಯಾಗಿದ್ದ ಕುಮಾರಸ್ವಾಮಿ ಅಲ್ಲಿಂದ ತಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸಬೇಕೆಂದು ಹಠ ಸಾಧಿಸುತ್ತಿದ್ದಾರೆ. ಉಂಟಾಗಿರುವ ಗೊಂದಲದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಕೇಳಿದರೆ ಸ್ಪಷ್ಟ ಉತ್ತರವಿಲ್ಲ. ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿರೋದು ನಿಜ, ಆದರೆ ಲೋಕಸಭಾ ಚುನಾವಣೆಯಿಂದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿರುವುದರಿಂದ ದೆಹಲಿ ಮಟ್ಟದಲ್ಲಿ ಎರಡು ಪಕ್ಷಗಳ ವರಿಷ್ಠರು ಕೂತು ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಸುಮಾರು 15 ದಿನಗಳ ಹಿಂದೆ ತಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೂ ವಿಷಯ ಚರ್ಚಿಸಿರುವುದಾಗಿ ಹೇಳಿದ ವಿಜಯೇಂದ್ರ ಅಭ್ಯರ್ಥಿಯ ಆಯ್ಕೆಗೆ ರಚಿಸಲಾಗಿದ್ದ ಸಮಿತಿ ಏನು ಶಿಫಾರಸ್ಸು ಮಾಡಿದೆ ಅನ್ನೋದು ತನ್ನ ಗಮನಕ್ಕೆ ಇನ್ನೂ ಬಂದಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಇಳಿಸಲು ಡಿಕೆ ಶಿವಕುಮಾರ್ ಮಾತಿನಂತೆ ಬಿವೈ ವಿಜಯೇಂದ್ರ ಪಾದಯಾತ್ರೆ: ಯತ್ನಾಳ್ ಹೊಸ ಬಾಂಬ್