ಕಲ್ಪವೃಕ್ಷಕ್ಕೆ ಕಪ್ಪುತಲೆ ಹುಳುವಿನ ಕಾಟ-ಆತಂಕದಲ್ಲಿ ಮಂಡ್ಯ ಜಿಲ್ಲೆಯ ತೆಂಗು ಬೆಳೆಗಾರರು

|

Updated on: Jul 21, 2023 | 6:29 PM

ಮಂಡ್ಯ ಜಿಲ್ಲೆಯಲ್ಲಿ ಸುಮಾರು 66 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಅದರಲ್ಲಿ 2 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಪ್ಪುಹುಳು ರೋಗ ಕಾಣಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆ ಪರಿಹಾರ ಕ್ರಮಕ್ಕೆ ಮುಂದಾಗಿದೆ.

ಸಕ್ಕರೆನಗರಿ ಮಂಡ್ಯ ಜಿಲ್ಲೆಯಲ್ಲಿ ಬಹುತೇಕ ರೈತರು ವಾಣಿಜ್ಯ ಬೆಳೆಯಾಗಿ ತೆಂಗು ಬೆಳೆಯನ್ನ ಪ್ರಮುಖವಾಗಿ ಬೆಳೆಯುತ್ತಾರೆ.ಆದರೆ ಇದೀಗ ತೆಂಗು ಬೆಳೆಗೆ ಕಪ್ಪುತಲೆ ಹುಳುವಿನ ಕಾಟ ಆರಂಭವಾಗಿದ್ದು, ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ. ಈ ಕುರಿತು ಒಂದು ವರದಿ. ಹೌದು ರೈತರ ಪಾಲಿನ ಕಲ್ಪವೃಕ್ಷ ತೆಂಗಿನ ಮರಕ್ಕೆ ಇದೀಗ ಕಪ್ಪುತಲೆ ಹುಳುವಿನ ಭಾದೆ ಆವರಿಸಿದೆ. ಮಂಡ್ಯ ಜಿಲ್ಲೆಯ ಮೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ತೆಂಗಿನ ಮರಗಳಲ್ಲಿ ಈ ರೋಗಿ ಕಾಣಿಸಿಕೊಂಡಿದ್ದು, ತೆಂಗು ಬೆಳೆಗಾರರನ್ನ ಕಂಗಾಲಾಗಿದೆ. ಅಂದಹಾಗೆ ಈಗಾಗಲೇ ತೆಂಗು ಬೆಳೆಗೆ ನುಸಿರೋಗ, ಕಾಂಡಕೊರಕ ಹುಳು ರೋಗಗಳು ಕೂಡ ತಗುಲಿ ರೈತರು ಪರದಾಡುತ್ತಿದ್ದಾರೆ. ಈ ಮಧ್ಯೆ ಇದೀಗ ಕಪ್ಪು ಹುಳುವಿನ ಕಾಟ ತೆಂಗು ಬೆಳೆಗಾರರನ್ನ ಚಿಂತೆಗೆ ದೂಡಿದೆ. ಅಂದಹಾಗೆ ಈ ರೋಗ ಕಾಣಿಸಿಕೊಂಡ ಮರಗಳ ಗರಿಗಳು ಸಂಪೂರ್ಣವಾಗಿ ಒಣಗಲಾರಂಭಿಸುತ್ತವೆ. ಮೊದಮೊದಲು ಒಂದು ಗರಿಯಲ್ಲಿ ಕಾಣಿಸಿ ನಂತರ ಇಡೀ ಮರದ ಗರಿಗಳಲ್ಲಿ ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಇಡೀ ತೋಟವನ್ನೇ ಆವರಿಸಿಕೊಂಡು ಬಿಡುತ್ತವೆ. ಅಷ್ಟೇ ಅಲ್ಲದೇ ಇಳುವರಿ ಕೂಡ ಕಡಿಮೆ ಆಗುತ್ತವೆ. ವಿಧಿಯಿಲ್ಲದೆ ಮರವನ್ನೇ ಕಡಿಯುವ ಹಂತಕ್ಕೆ ರೈತರು ಹೋಗಬೇಕಾಗುತ್ತದೆ. ಇದು ತೆಂಗು ಬೆಳೆಗಾರರಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ.

ಅಂದಹಾಗೆ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಯನ್ನ ಹೆಚ್ಚಾಗಿ ಬೆಳೆಯಲಾಗುತ್ತದೆ. ಆದಾದ ನಂತರದಲ್ಲಿ ವಾಣಿಜ್ಯ ಬೆಳೆಯಾಗಿ ತೆಂಗು ಬೆಳೆಯನ್ನ ಬೆಳೆಯಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಸುಮಾರು 66 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನ ಬೆಳೆಯಲಾಗುತ್ತದೆ. ಅದರಲ್ಲಿ ಸುಮಾರು ಎರಡು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಪ್ಪುಹುಳು ರೋಗ ಕಾಣಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕೂಡ ಪರಿಹಾರ ಕ್ರಮಕ್ಕೆ ಮುಂದಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ತೆಂಗಿನಮರಗಳಿಗೆ ಕಪ್ಪು ಹುಳುಭಾದೆ ಕಾಣಿಸಿಕೊಂಡಿದ್ದು, ತೆಂಗು ಬೆಳೆಗಾರರು ಕಂಗಲಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ.

ವರದಿ: ಪ್ರಶಾಂತ್ ಹುಲಿಕೆರೆ – ಮಂಡ್ಯ

Follow us on