ಬಿಎಂಟಿಸಿ ಬಸ್‌ನಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್: ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಲು ಯತ್ನಿಸಿದ ಕಂಡಕ್ಟರ್

Edited By:

Updated on: Jul 11, 2026 | 10:50 PM

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ದಿಢೀರ್ 'ರಿಯಾಲಿಟಿ ಚೆಕ್' ನಡೆಸಿದರು. ಈ ವೇಳೆ, ಕಂಡಕ್ಟರ್ ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್ಸಿನಿಂದ ಇಳಿಯುವಂತೆ ತಾಕೀತು ಮಾಡಿದ ಆಘಾತಕಾರಿ ಘಟನೆ ನಡೆಯಿತು. ಈ ಪರಿಶೀಲನೆಯು ಸಾರ್ವಜನಿಕರು ಪ್ರತಿದಿನ ಬಿಎಂಟಿಸಿ ಬಸ್ ಸಮಸ್ಯೆಗಳು, ನಿರ್ವಾಹಕರ ದರ್ಪ ಹಾಗೂ ದಬ್ಬಾಳಿಕೆಯನ್ನು ಬಯಲಿಗೆಳೆಯಿತು.

ಬೆಂಗಳೂರು, ಜು.11: ಸಿಲಿಕಾನ್ ಸಿಟಿಯ ಬಿಎಂಟಿಸಿ (BMTC) ಬಸ್‌ಗಳಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ನಿರ್ವಾಹಕರ ಕಳ್ಳಾಟವನ್ನು ಬಯಲಿಗೆಳೆಯಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಇಂದು (ಜು.11) ಮಾಸ್ಕ್ ಧರಿಸಿ ದಿಢೀರ್ ‘ಸ್ವಯಂ ರಿಯಾಲಿಟಿ ಚೆಕ್’ ನಡೆಸಿದ್ದಾರೆ. ಈ ವೇಳೆ ಸಚಿವರನ್ನೇ ಕಂಡಕ್ಟರ್ ಒಬ್ಬರು ಬಸ್‌ನಿಂದ ಕೆಳಗಿಳಿಸಲು ಯತ್ನಿಸಿದ ತೀವ್ರ ಆಘಾತಕಾರಿ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಸಚಿವರ ಈ ದಿಢೀರ್ ಭೇಟಿಯಿಂದಾಗಿ ಬಿಎಂಟಿಸಿ ಇಲಾಖೆಯ ಹಲವು ಅಕ್ರಮಗಳು ಮತ್ತು ಸಾರ್ವಜನಿಕರ ಮೇಲಿನ ದಬ್ಬಾಳಿಕೆ ರಸ್ತೆಯಲ್ಲೇ ಸಾಬೀತಾಗಿದೆ. ಬೆಂಗಳೂರಿನ ಭೂಪಸಂದ್ರದಿಂದ ಹೆಬ್ಬಾಳಕ್ಕೆ ತೆರಳುವ ಬಿಎಂಟಿಸಿ ಬಸ್‌ಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕನಂತೆ ಮಾಸ್ಕ್ ಧರಿಸಿ ಹತ್ತಿದ್ದಾರೆ. ಬಸ್ ಚಲಿಸಲು ಆರಂಭಿಸಿದಾಗ ಎರಡು ಟಿಕೆಟ್ ನೀಡುವಂತೆ ಕಂಡಕ್ಟರ್‌ಗೆ ಕೇಳಿ, ಅದಕ್ಕಾಗಿ 100 ರೂಪಾಯಿ ನೋಟನ್ನು ನೀಡಿದ್ದಾರೆ. ಈ ವೇಳೆ ಕಂಡಕ್ಟರ್, “ನನ್ನ ಬಳಿ ಚಿಲ್ಲರೆ ಇಲ್ಲ, ಮೊದಲು ನನಗೆ 12 ರೂಪಾಯಿ ಚಿಲ್ಲರೆ ಕೊಡಿ” ಎಂದು ಸಚಿವರಿಗೆ ತಾಕೀತು ಮಾಡಿದ್ದಾನೆ.

ಇದಕ್ಕೆ ಸಚಿವರು “ನನ್ನ ಬಳಿ ಚಿಲ್ಲರೆ ಇಲ್ಲ” ಎಂದು ಉತ್ತರಿಸುತ್ತಿದ್ದಂತೆಯೇ, ಆತ ಸಚಿವರೆಂಬುದನ್ನು ತಿಳಿಯದ ಕಂಡಕ್ಟರ್ ಉದ್ಧಟತನ ಪ್ರದರ್ಶಿಸಿ, “ಚಿಲ್ಲರೆ ಇಲ್ಲದಿದ್ದರೆ ತಕ್ಷಣ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದು ಸಚಿವರಿಗೇ ಆರ್ಡರ್ ಮಾಡಿದ್ದಾನೆ. ಈ ವೇಳೆ ಸಚಿವರು ಮಾಸ್ಕ್ ತೆಗೆದು ತಮ್ಮ ಗುರುತು ಪರಿಚಯಿಸುತ್ತಿದ್ದಂತೆಯೇ ಕಂಡಕ್ಟರ್ ಹಾಗೂ ಬಸ್‌ನಲ್ಲಿದ್ದ ಸಿಬ್ಬಂದಿ ಅಕ್ಷರಶಃ ಶಾಕ್ ಆಗಿದ್ದಾರೆ. ಪ್ರತಿದಿನ ಸಾಮಾನ್ಯ ನಾಗರಿಕರು ಚಿಲ್ಲರೆ ವಿಚಾರವಾಗಿ ಇಂತಹ ಎಷ್ಟೋ ಕಟು ಅನುಭವಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸಚಿವರು ಸ್ಥಳದಲ್ಲೇ ಮನಗಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 11, 2026 10:16 PM
Follow Us