Gadag News: ಅಡುಗೆ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾವಿಂದ ಕುಟುಂಬಸ್ಥರನ್ನು ರಕ್ಷಿಸಿದ ಬೆಕ್ಕುಗಳು

| Updated By: ಆಯೇಷಾ ಬಾನು

Updated on: Jul 06, 2023 | 11:29 AM

ಗದಗ ಜಿಲ್ಲೆ ನರಗುಂದ ಪಟ್ಟಣದ ಅಂಬೇಡ್ಕರ್ ನಗರದ ಲಕ್ಷ್ಮಣ ಚಲವಾದಿ ಎನ್ನುವವರ ಕುಟುಂಬದವರು ಸಾಕಿದ್ದ ಬೆಕ್ಕುಗಳು ಹಾವಿಂದ ಕುಟುಂಬವನ್ನು ರಕ್ಷಿಸಿವೆ.

ಗದಗ: ಮನೆ ಕಾವಲಿಗೆ, ಕುಟುಂಬದ ರಕ್ಷಣೆಗೆ ನಾಯಿಗಳು ಬೆಸ್ಟ್ ಎಂದು ನಾಯಿ ಸಾಕುವುದು ಸಾಮಾನ್ಯ. ಆದ್ರೆ ಇಲ್ಲಿ ಬೆಕ್ಕುಗಳು ವಿಷಕಾರಿ ಹಾವಿನಿಂದ ಕುಟುಂಬಸ್ಥರನ್ನು ಬಚಾವ್ ಮಾಡಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಅಂಬೇಡ್ಕರ್ ನಗರದ ಲಕ್ಷ್ಮಣ ಚಲವಾದಿ ಎನ್ನುವವರ ಕುಟುಂಬದವರು ಸಾಕಿದ್ದ ಬೆಕ್ಕುಗಳು ಕುಟುಂಬವನ್ನು ರಕ್ಷಿಸಿವೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆಮನೆಗೆ ಸೇರಿದೆ. ಹಾವು ಸೇರಿದ್ದನ್ನು ಮನೆಯಲ್ಲಿ ಇದ್ದ ಜೋಡಿ ಬೆಕ್ಕುಗಳು ನೋಡಿವೆ. ಮನೆ ಮಾಲೀಕರು ಆಗಮಿಸುತ್ತಿದ್ದಂತೆಯೇ ಅಡುಗೆ ಮನೆ ಬಳಿ ಎರಡು ಬೆಕ್ಕುಗಳು ನಿಂತು ಮೆಂವ್….ಮೆಂವ್…ಅಂತ ಅಂದಿವೆ. ಇದರಿಂದಾಗಿ ಮನೆ ಮಾಲೀಕರು ಬೆಕ್ಕುಗಳ ವರ್ತನೆಯಿಂದ ಗಾಬರಿಯಾಗಿ ಕಣ್ಣಾಡಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಕ್ಷಣವೇ ಉರಗ ತಜ್ಞ ಸುರೇಬಾನ ಅವರನ್ನು ಕರೆಸಿ ನಾಗರಹಾವು ಹಿಡಿಸಿದ್ದಾರೆ.

ಅಡುಗೆ ಮನೆಯಲ್ಲಿ ಇದ್ದ ನಾಗರಹಾವು ಖಾಲಿ ಡಬ್ಬಾ ಸೇರುತ್ತಿದ್ದಂತೆಯೇ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ಅಷ್ಟೇ ಅಲ್ಲ ಸೆರೆ ಸಿಕ್ಕ ನಾಗರಹಾವಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ನಂತರ ನಾಗರಹಾವು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ನಂತರ ನಾಗರಹಾವಿನಿಂದ ರಕ್ಷಿಸಿದ ಬೆಕ್ಕುಗಳನ್ನು ಕುಟುಂಬ ಸದಸ್ಯರು ಮುದ್ದಾಡಿ ಸಂತಸಪಟ್ಟರು.

Published On - 10:39 am, Thu, 6 July 23

Follow us on