ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಮೈಸೂರಿನ ಡಾ. ರಮ್ಯಾ ಬರೆದ ಚಲಿಸುವ ಬಂಡೆ ಡಿ.ಕೆ. ಶಿವಕುಮಾರ್ ಪುಸ್ತಕ ಲೋಕಾರ್ಪಣೆಯಾಗಿದೆ. ಇದು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಹೋರಾಟ, ಸಂಕಷ್ಟಗಳು ಹಾಗೂ ಸಿಎಂ ಪಟ್ಟಕ್ಕೇರಿದ ಪಯಣವನ್ನು ವಿವರಿಸುತ್ತದೆ. ಸ್ವತಃ ಡಿ.ಕೆ. ಶಿವಕುಮಾರ್ ಅವರು ಭವಿಷ್ಯದಲ್ಲಿ ತಮ್ಮದೇ ಪುಸ್ತಕ ಬರೆಯುವ ಸುಳಿವು ನೀಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರು, ನವೆಂಬರ್ 12: ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ರಮ್ಯಾ ಬರೆದಿರುವ ಚಲಿಸುವ ಬಂಡೆ ಡಿ.ಕೆ. ಶಿವಕುಮಾರ್ ಎಂಬ ಪುಸ್ತಕ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಕುರಿತಾದ ಈ ಪುಸ್ತಕವು, ಡಾ. ರಮ್ಯಾ ಅವರ ಐದು ವರ್ಷಗಳ ಹಿಂದಿನ ಪಿಎಚ್‌ಡಿ ಸಂಶೋಧನಾ ಪ್ರಬಂಧವನ್ನು ಆಧರಿಸಿದೆ. ಒಟ್ಟು ಹತ್ತು ವರ್ಷಗಳ ಸಂಶೋಧನೆಯ ಫಲವಾಗಿ ಈ ಕೃತಿ ಹೊರಬಂದಿದೆ.
ಪುಸ್ತಕದಲ್ಲಿ ಡಿ.ಕೆ. ಶಿವಕುಮಾರ್ ಅವರ ವಿದ್ಯಾರ್ಥಿ ಜೀವನದಿಂದಲೇ ಆರಂಭವಾದ ಹೋರಾಟಗಳು, ರಾಜಕೀಯ ಪ್ರವೇಶ, ಘಟಾನುಘಟಿಗಳ ಜೊತೆಗಿನ ಒಡನಾಟ, ಶಾಸಕ-ಸಚಿವರಾಗಿ ಮಾಡಿದ ಕೆಲಸಗಳು, ಅನುಭವಿಸಿದ ಸಂಕಷ್ಟಗಳು (ಇಡಿ, ತಿಹಾರ್ ಜೈಲು) ಮತ್ತು ಮುಖ್ಯಮಂತ್ರಿ ಸ್ಥಾನದವರೆಗಿನ ಅವರ ಪಯಣವನ್ನು ಕಟ್ಟಿಕೊಡಲಾಗಿದೆ. ನನ್ನ ಜೀವನ ತೆರೆದ ಪುಸ್ತಕ ಎಂದು ಡಿ.ಕೆ. ಶಿವಕುಮಾರ್ ಡಾ. ರಮ್ಯಾ ಅವರ ಸಂಶೋಧನೆಗೆ ಅನುಮತಿ ನೀಡಿದ್ದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿಗಳು ಸೇರಿದಂತೆ ಹಲವು ಸಚಿವರು, ಶಾಸಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು, ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾದಾಗ ತಮ್ಮ ಪಾತ್ರ ಏನಿತ್ತು ಎಂಬುದನ್ನು ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ದಾಖಲಿಸುವ ಸುಳಿವು ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
