Champions Trophy 2025: ಪಿಸಿಬಿಯ ಮಹಾ ಎಡವಟ್ಟು; ಆಸ್ಟ್ರೇಲಿಯಾ ರಾಷ್ಟ್ರಗೀತೆ ಬದಲು ಭಾರತದ ರಾಷ್ಟ್ರಗೀತೆ ಪ್ರಸಾರ
Champions Trophy 2025: 2025 ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಆದರೆ ಟೀಂ ಇಂಡಿಯಾ ಮಾತ್ರ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಆದರೂ, ನಮ್ಮ ಭಾರತದ ರಾಷ್ಟ್ರಗೀತೆ ಪಾಕಿಸ್ತಾನಿ ನೆಲದಲ್ಲಿ ಕೇಳಿಬಂದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವಹಿಸಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದೊಂದು ಪಂದ್ಯದಲ್ಲೂ ಒಂದೊಂದು ಎಡವಟ್ಟುಗಳನ್ನು ಮಾಡಿಕೊಳ್ಳುವ ಮೂಲಕ ನಗೆಪಾಟಲಿಗೀಡಾಗುತ್ತಿದೆ. ಇದೀಗ ಲಾಹೋರ್ನ ಗಡಾಫಿ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲೂ ಎಡವಟ್ಟೊಂದನ್ನು ಮಾಡಿದೆ. ವಾಸ್ತವವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ದೇಶದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಬದಲು ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಗಿದೆ. ಪಿಸಿಬಿಯ ಈ ಎಡವಟ್ಟಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವಾಸ್ತವವಾಗಿ ಐಸಿಸಿ ಟೂರ್ನಿಗಳಲ್ಲಿ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಯಾವೆರಡು ತಂಡಗಳು ಪಂದ್ಯಗಳನ್ನಾಡುತ್ತಿರುತ್ತವೆಯೋ ಆ ದೇಶಗಳ ರಾಷ್ಟ್ರಗೀತೆಯನ್ನು ಕ್ರೀಡಾಂಗಣದಲ್ಲಿ ಪ್ರಸಾರ ಮಾಡಲಾಗುತ್ತದೆ. ಅದರಂತೆ ಇಂದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಟಾಸ್ ಬಳಿಕ ರಾಷ್ಟ್ರಗೀತೆಗಾಗಿ ಮೈದಾನದಲ್ಲಿ ಹಾಜರಿದ್ದರು. ಈ ವೇಳೆ ಗಡಾಫಿ ಮೈದಾನದಲ್ಲಿ ರಾಷ್ಟ್ರಗೀತೆಯ ಪ್ರಸಾರವೂ ಶುರುವಾಯಿತು. ಆದರೆ ಸಂಘಟಕರು ಮಾಡಿದ ತಪ್ಪೇನೆಂದರೆ, ಆಸ್ಟ್ರೇಲಿಯಾ ದೇಶದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಬದಲು ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ