Loading video

ಶ್ರೇಯಸ್ ಅಯ್ಯರ್ ರಾಕೆಟ್ ಥ್ರೋಗೆ ಒಲಿದ ಬೆಸ್ಟ್ ಫೀಲ್ಡರ್ ಪ್ರಶಸ್ತಿ

|

Updated on: Mar 06, 2025 | 12:53 PM

ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಏಕದಿನ ವಿಶ್ವಕಪ್ ವೇಳೆ ಭಾರತದ ಪರ ಅತ್ಯುತ್ತಮ ಫೀಲ್ಡಿಂಗ್ ಮಾಡುವ ಆಟಗಾರನಿಗೆ ವಿಶೇಷ ಪ್ರಶಸ್ತಿ ನೀಡುವ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದು ಈಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆದಿದೆ. ಅದರಂತೆ ಸೆಮಿಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್​ಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಲಭಿಸಿದೆ.

ದುಬೈನ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅದ್ಭುತ ಫೀಲ್ಡಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಪೋಟಕ ಇನಿಂಗ್ಸ್ ಆಡಿದ್ದ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು.

57 ಎಸೆತಗಳಲ್ಲಿ 8 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 61 ರನ್ ಬಾರಿಸಿದ್ದ ಅಲೆಕ್ಸ್ ಕ್ಯಾರಿ ಕೊನೆಯ ಓವರ್​ಗಳ ವೇಳೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ 48ನೇ ಓವರ್​ನ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಎಸೆದ ಡೈರೆಕ್ಟ್ ಥ್ರೋನಿಂದಾಗಿ ಅಲೆಕ್ಸ್ ಕ್ಯಾರಿ ರನೌಟ್ ಆದರು. ಈ ರನೌಟ್​ನಿಂದಾಗಿ ಆಸ್ಟ್ರೇಲಿಯಾ ತಂಡದ ರನ್ ಗತಿಯು ಇಳಿಮುಖವಾಯಿತು.

ಇದೀಗ ಈ ಅದ್ಭುತ ಫೀಲ್ಡಿಂಗ್​ಗೆ ಶ್ರೇಯಸ್ ಅಯ್ಯರ್​ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ನಡೆದ ಡ್ರೆಸ್ಸಿಂಗ್ ರೂಮ್ ಸಂಭ್ರಮದ ವೇಳೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ಶ್ರೇಯಸ್ ಅಯ್ಯರ್ ಅವರಿಗೆ ಫೀಲ್ಡರ್ ಆಫ್ ದಿ ಮ್ಯಾಚ್ ಮೆಡಲ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 264 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 48.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಫೈನಲ್​ಗೆ ಪ್ರವೇಶಿಸಿದೆ.