ಬೆಂಗಳೂರು: ಕಂಪೌಂಡ್ ಗೋಡೆ ಕುಸಿದು ಅದಕ್ಕೆ ಅಂಟಿಕೊಂಡಿರುವ ಮನೆಗಳಿಗೆ ಅಪಾಯ, ಮನೆಯಲ್ಲಿದ್ದವರ ಬದುಕು ಅತಂತ್ರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 12, 2021 | 12:53 AM

ಮಳೆಯಿಂದಾಗುವ ಅನಾಹುತಗಳು ಒಂದೆರಡಲ್ಲ. ಬೆಂಗಳೂರಿನಲ್ಲಿ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಿದೆ ಮತ್ತು ಅದಕ್ಕೆ ಸಂಬಂಧಿಸಿದ ಅನಾಹುತಗಳು ಜರುಗುತ್ತಿವೆ.

ಮಳೆ ನಮ್ಮಲ್ಲಿ ನಿಸ್ಸಂದೇಹವಾಗಿ ಹರ್ಷವನ್ನುಂಟು ಮಾಡುತ್ತದೆ. ಬೇಸಿಗೆ ಮುಗಿದ ನಂತರ ಮಳೆಗಾಲ ಅರಂಭವಾಗಿ ಅಲ್ಲಿಯವರೆಗೆ ಹೆಂಚಿನಂತಾದ ಭೂಮಿಯ ಮೇಲೆ ಮೊದಲ ಮಳೆ ಬಿದ್ದಾಗ ನಮ್ಮ ಮೂಗಿಗೆ ಅಡರುವ ಮಣ್ಣಿನ ಸವಾಸನೆಯನ್ನು ಒಮ್ಮೆ ನೆನೆಪಿಸಿಕೊಳ್ಳಿ. ಹೌದು ಸುವಾಸನೆಯೇ! ನಗರ ಪ್ರದೇಶಗಳಲ್ಲಿ ವಾಸಿಸುವ ಜನ ಈ ಸುವಾಸನೆ ಉಂಟು ಮಾಡುವ ಖುಷಿಯನ್ನು ಅರಿತಿರಲಾರರೆನೋ. ಆದರೆ ಮಳೆಗಾಗಿ ಜಪಿಸುವ, ತಪಿಸುವ ರೈತಾಪಿ ಜನಕ್ಕೆ ಆ ವಾಸನೆ ರೋಮಾಂಚಿತರನ್ನಾಗಿಸುತ್ತದೆ. ಅದು ಅವರಿಗೆ ಮತ್ತು ಇಡೀ ದೇಶದ ಜನರಿಗೆ ಅನ್ನ ಒದಗಿಸುವ ಸುವಾಸನೆ. ಮೊದಲ ಮಳೆ ಸುರಿದು ಜಮೀನು ತೇವಗೊಂಡ ನಂತರ ರೈತ ಉಳುಮೆ ಅರಂಭಿಸುತ್ತಾನೆ. ನಮ್ಮ ದೇಶದ ಬೇಸಾಯಗಾರ ಮೊದಲಿನಿಂದಲೂ ಮಳೆಯನ್ನು ನೆಚ್ಚಿಕೊಂಡಿದ್ದಾನೆ ಮುಂದೆಯೂ ಅದರ ಮೇಲೆಯೇ ಅವಲಂಬಿತನಾಗಿರುತ್ತಾನೆ.

ಮಳೆ ನಮ್ಮಲ್ಲಿ ಆನಂದ ಉಂಟು ಮಾಡುವ ಪರಿ ಇದಾದರೆ ಹಲವಾರು ವಿಧಗಳಲ್ಲಿ ನಮ್ಮನ್ನು ದುಃಖಿತರನ್ನಾಗಿ ಮಾಡುತ್ತದೆ. ಮಳೆಯಿಂದಾಗುವ ಅನಾಹುತಗಳು ಒಂದೆರಡಲ್ಲ. ಬೆಂಗಳೂರಿನಲ್ಲಿ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಿದೆ ಮತ್ತು ಅದಕ್ಕೆ ಸಂಬಂಧಿಸಿದ ಅನಾಹುತಗಳು ಜರುಗುತ್ತಿವೆ. ಈ ವಿಡಿಯೋನಲ್ಲಿ ನಿಮಗೆ ಕಾಣಿತ್ತಿರೋದು ನಗರದ ಮೆಜೆಸ್ಟಿಕ್ ಪ್ರದೇಶದ ಒಂದು ಏರಿಯಾ. ಆ ಭಾಗದಲ್ಲಿ ರೇಲ್ವೇ ಅಂಡರ್ ಪಾಸ್ ಇದೆ. ಈ ಭಾಗದಲ್ಲಿ ಉದ್ದನೆಯ ಕಂಪೌಂಡ್ ಗೋಡೆ ಇದ್ದು ಸತತ ಮಳೆಯಿಂದ ಅದು ಶಿಥಿಲಗೊಂಡು ಒಂದು ಕಡೆ ಕುಸಿದಿದೆ.

ಕಂಪೌಂಡ್ ಗೋಡೆಗೆ ಅಂಟಿಕೊಂಡು ಕೆಲ ಮನೆಗಳಿರೋದು ನಿಮಗೆ ಕಾಣುತ್ತಿರಬಹುದು. ಆ ಕಡೆ ಗೋಡೆ ಕುಸಿದಿರುವುದರಿಂದ ಈ ಹಸಿರು ಬಣ್ಣದ ಮನೆ ಸಹ ಕುಸಿಯುವ ಅಪಾಯದಲ್ಲಿದೆ. ಬಿ ಬಿ ಎಮ್ ಪಿ ಅಧಿಕಾರಿಗಳು ಮನೆಯೊಳಗೆ ಹೋಗದಿರುವಂತೆ ಸೂಚನೆ ನೀಡಿರುವುದರಿಂದ ಆ ಮನೆ ಮತ್ತು ಅದರ ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಆತಂಕದಿಂದ ಹೊರಗೆ ನಿಂತಿದ್ದಾರೆ.

ಇವರ ಬದುಕು ಈಗ ಅತಂತ್ರ. ಒಂದೆರಡು ದಿನಗಳನ್ನು ಹೇಗೋ ಬೇರೆಯವರ ಮನೆಯಲ್ಲಿ ಕಳೆಯಬಹುದು. ಮುಂದೆ? ಕಂಪೌಂಡ್ ಗೋಡೆ ರಿಪೇರಿಯಾಗೋದು ಯಾವಾಗಲೋ. ಅಲ್ಲಿಯವರೆಗೆ ಪಾಲಿಕೆ ಅಥವಾ ಸರ್ಕಾರ ಅತಂಕದಲ್ಲಿರುವ ಈ ಜನರಿಗೆ ಒಂದು ಪರ್ಯಾಯ ವ್ಯವಸ್ಥೆ ಮಾಡಬಹುದೆ?

ಇದನ್ನೂ ಓದಿ: ಹಾಸನದಲ್ಲಿ ಒಂದೇ ಕಡೆ ಬೀಡುಬಿಟ್ಟಿರುವ 35ಕ್ಕೂ ಹೆಚ್ಚು ಕಾಡಾನೆಗಳು; ವಿಡಿಯೋ ವೈರಲ್