IND vs SA: ಸಂಜು ತೋಳ್ಬಲಕ್ಕೆ ಸಿಲುಕಿ ಮೈದಾನದಲ್ಲೇ ಬಿದ್ದು ಒದ್ದಾಡಿದ ಅಂಪೈರ್; ವಿಡಿಯೋ ನೋಡಿ
Sanju Samson's Shot Hits Umpire Rohan Pandit: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಿಡಿಸಿದ ಬಲವಾದ ಹೊಡೆತ ಅಂಪೈರ್ ರೋಹನ್ ಪಂಡಿತ್ ಅವರ ಮೊಣಕಾಲಿಗೆ ಬಡಿದಿದೆ. ಇದರಿಂದ ಅಂಪೈರ್ ನೋವಿನಿಂದ ನರಳಿದರು. ಕೂಡಲೇ ವೈದ್ಯಕೀಯ ತಂಡದ ನೆರವು ಪಡೆದು ಅವರು ಚೇತರಿಸಿಕೊಂಡರು. ಅಹಮದಾಬಾದ್‌ನಲ್ಲಿ ನಡೆದ ಈ ಘಟನೆ ಪಂದ್ಯಕ್ಕೆ ಅಲ್ಪ ವಿರಾಮ ನೀಡಿದರೂ, ರೋಹನ್ ಪಂಡಿತ್ ಮತ್ತೆ ಅಂಪೈರಿಂಗ್ ಮುಂದುವರೆಸಿದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಅಂಪೈರ್ ಕಾಲಿಗೆ ರಬಸವಾಗಿ ಬಡಿಯಿತು. ಇದರಿಂದಾಗಿ ಅಂಪೈರ್ ಕೆಲಕಾಲ ಮೈದಾನದಲ್ಲಿ ನೋವಿನಿಂದ ನರಳುವಂತ್ತಾಯಿತು.
ಭಾರತದ ಇನ್ನಿಂಗ್ಸ್ನ 9ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಆಫ್ರಿಕಾ ಸ್ಪಿನ್ನರ್ ಫರೆರಾ ಬೌಲ್ ಮಾಡಿದ ನಾಲ್ಕನೇ ಎಸೆತವನ್ನು ಸ್ಯಾಮ್ಸನ್ ನೇರವಾಗಿ ಹೊಡೆದರು. ಇತ್ತ ಆ ಹೊಡೆತ ಸೀದ ಬೌಲರ್ ಕೈಗೆ ಹೋಯಿತು. ಆದರೆ ಫರೆರಾಗೆ ಆ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಬೌಲರ್ ಕೈಗೆ ಬಡಿದು, ಬೌಲರ್ಸ್ ಎಂಡ್ನಲ್ಲಿ ಅಂಪೈರಿಂಗ್ ಮಾಡುತ್ತಿದ್ದ ರೋಹನ್ ಪಂಡಿತ್ ಅವರ ಬಲ ಮೊಣಕಾಲಿಗೆ ಬಡಿಯಿತು.
ಚೆಂಡಿನ ರಬಸ ಎಷ್ಟಿತ್ತೆಂದರೆ, ಅಂಪೈರ್ ರೋಹನ್ ಪಂಡಿತ್ ನಡೆಯಲು ಸಾಧ್ಯವಾಗದೆ ನೋವಿನಿಂದ ಮೈದಾನದಲ್ಲೇ ಮಲಗಿದರು. ಕೂಡಲೇ ಮೈದಾನಕ್ಕೆ ಬಂದ ಪಿಸಿಯೋ, ರೋಹನ್ ಪಂಡಿತ್ ಅವರನ್ನು ಪರೀಕ್ಷಿಸಿದರು. ಸ್ವಲ್ಪ ಸಮಯದ ನಂತರ ಕೊಂಚ ಸುಧಾರಿಸಿಕೊಂಡ ರೋಹನ್ ಪಂಡಿತ್ ಮತ್ತೆ ಅಂಪೈರಿಂಗ್ ಮುಂದುವರೆಸಿದರು.
ಇನ್ನು ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 37 ರನ್ ಬಾರಿಸಿದರು. ಸ್ಯಾಮ್ಸನ್ ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಸ್ಯಾಮ್ಸನ್ 21 ಎಸೆತಗಳಲ್ಲಿ ತಿಲಕ್ ಅವರೊಂದಿಗೆ 34 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ