IPL 2025: ಐಪಿಎಲ್​ಗೆ ಧೋನಿ ವಿದಾಯ? ಮತ್ತೆ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಕ್ಯಾಪ್ಟನ್ ಕೂಲ್

Updated on: May 25, 2025 | 8:19 PM

MS Dhoni: ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 85 ರನ್‌ಗಳ ಭರ್ಜರಿ ಜಯ ಸಾಧಿಸಿತು. ಆದರೆ, ಲೀಗ್ ಹಂತದಲ್ಲಿಯೇ ತಂಡದ ಪ್ರಯಾಣ ಕೊನೆಗೊಂಡಿತು. ಪಂದ್ಯದ ಬಳಿಕ ಮಾತನಾಡಿದ ಎಂ.ಎಸ್. ಧೋನಿ ಅವರು ತಮ್ಮ ನಿವೃತ್ತಿಯ ಬಗ್ಗೆ 4-5 ತಿಂಗಳ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು. ಇದರರ್ಥ ಧೋನಿ ಮುಂದಿನ ಸೀಸನ್ ಆಡುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಮುಂದಿನ ಸೀಸನ್​ವರೆಗೂ ಕಾಯಬೇಕಾಗುತ್ತದೆ.

ಐಪಿಎಲ್ 2025 ರ ಆವೃತ್ತಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದ ಸಿಎಸ್​ಕೆ ಅಂತ್ಯವನ್ನು ಸಹ ಗೆಲುವಿನೊಂದಿಗೆ ಮುಗಿಸಿದೆ. ಆದರೆ ಈ ಆರಂಭ ಮತ್ತು ಅಂತ್ಯದ ನಡುವೆ ನಡೆದ 12 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಎಸ್​ಕೆಗೆ ಪ್ಲೇ ಆಫ್ ಟಿಕೆಟ್​ ಸಿಗಲಿಲ್ಲ. ಹೀಗಾಗಿ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಕೊನೆಗೊಂಡಿದೆ. ಆದಾಗ್ಯೂ ಅಹಮದಾಬಾದ್‌ನಲ್ಲಿ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ತಂಡ, ಈಗಾಗಲೇ ಪ್ಲೇಆಫ್ ತಲುಪಿದ್ದ ಮತ್ತು ಫೈನಲ್‌ಗೆ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟ ಗುಜರಾತ್ ಟೈಟನ್ಸ್ ತಂಡವನ್ನು ಸಂಪೂರ್ಣವಾಗಿ ಏಕಪಕ್ಷೀಯ ರೀತಿಯಲ್ಲಿ 85 ರನ್‌ಗಳಿಂದ ಸೋಲಿಸಿತು. ಗೆಲುವಿನ ಬಳಿಕ ಮಾತನಾಡಿದ ತಂಡದ ನಾಯಕ ಎಂಎಸ್ ಧೊನಿ ಮತ್ತದೇ ತಮ್ಮ ಹಳೆಯ ಶೈಲಿಯಲ್ಲಿ ಅಭಿಮಾನಿಗಳನ್ನು ಮುಂದಿನ ವರ್ಷದವರೆಗೂ ಕಾಯುವಂತಹ ಶಿಕ್ಷೆ ನೀಡಿ ಈ ಮಿಲಿಯನ್ ಡಾಲರ್ ಟೂರ್ನಿಗೆ ಅಂತ್ಯ ಹಾಡಿದರು.

ಗುಜರಾತ್ ತಂಡವನ್ನು 83 ರನ್​ಗಳಿಂದ ಮಣಿಸಿದ ಬಳಿಕ ಮಾತನಾಡಿದ ಧೋನಿ ಬಳಿ ನಿರೀಕ್ಷಿತ ಪ್ರಶ್ನೆಯನ್ನೇ ಕೇಳಲಾಯಿತು. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಧೋನಿ, ಕಳೆದ ಕೆಲವು ಆವೃತ್ತಿಗಳ ಕೊನೆಯಲ್ಲಿ ನೀಡುತ್ತಿದ್ದ ಉತ್ತರವನ್ನು ಈ ಆವೃತ್ತಿಯಲ್ಲೂ ಪುನರ್​ಚ್ಚರಿಸಿದರು.

ನಿರ್ಧರಿಸಲು ಸಾಕಷ್ಟು ಸಮಯವಿದೆ

ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ‘ನಿವೃತ್ತಿಯ ಬಗ್ಗೆ ನಿರ್ಧರಿಸಲು ನನಗೆ ಇನ್ನು 4-5 ತಿಂಗಳುಗಳಿವೆ. ಏನು ಮಾಡಬೇಕೆಂಬುದರ ಬಗ್ಗೆ ಆತುರವಿಲ್ಲ. ದೇಹವನ್ನು ಸದೃಢವಾಗಿಡಲು ಪ್ರತಿ ವರ್ಷ 50% ಹೆಚ್ಚಿನ ಶ್ರಮ ಬೇಕಾಗುತ್ತದೆ. ಇದು ಕ್ರಿಕೆಟ್‌ನ ಅತ್ಯುನ್ನತ ಮಟ್ಟ. ಆಟಗಾರರು ಪ್ರದರ್ಶನದ ಆಧಾರದ ಮೇಲೆ ನಿವೃತ್ತಿ ಹೊಂದಲು ಪ್ರಾರಂಭಿಸಿದರೆ, ಅವರಲ್ಲಿ ಹಲವರು 22 ನೇ ವಯಸ್ಸಿನಲ್ಲಿ ನಿವೃತ್ತರಾಗಬೇಕಾಗುತ್ತದೆ. ನಿಮಗೆ ಎಷ್ಟು ಹಸಿವಿದೆ, ನೀವು ಎಷ್ಟು ಫಿಟ್ ಆಗಿದ್ದೀರಿ ಮತ್ತು ತಂಡಕ್ಕೆ ನೀವು ಎಷ್ಟು ಕೊಡುಗೆ ನೀಡಬಹುದು ಮತ್ತು ತಂಡಕ್ಕೆ ನಿಮ್ಮ ಅಗತ್ಯವಿದೆಯೇ ಎಂಬುದು ಮುಖ್ಯ. ನನಗೆ ಸಾಕಷ್ಟು ಸಮಯವಿದೆ. ನಾನು ರಾಂಚಿಗೆ ಹಿಂತಿರುಗುತ್ತೇನೆ, ನಾನು ಬಹಳ ದಿನಗಳಿಂದ ಮನೆಗೆ ಹೋಗಿಲ್ಲ. ಮನೆಗೆ ತೆರಳಿದ ಬಳಿಕ ಬೈಕ್ ಸವಾರಿಯನ್ನು ಆನಂದಿಸುತ್ತೇನೆ, ಆ ಬಳಿಕ ಎರಡು-ಮೂರು ತಿಂಗಳ ನಂತರ ನಿರ್ಧರಿಸುತ್ತೇನೆ.

ಯಾವುದನ್ನೂ ಖಚಿತವಾಗಿ ಹೇಳಲಾರೆ

ಹೀಗೆ ಹೇಳಿದ ಮಾತ್ರಕ್ಕೆ ನಾನು ಮುಂದಿನ ಸೀಸನ್ ಆಡುತ್ತೇನೆ ಎಂದು ಹೇಳುತ್ತಿಲ್ಲ. ಹಾಗೆಯೇ ಐಪಿಎಲ್ ಪ್ರಯಾಣವನ್ನು ಇಲ್ಲಿಗೆ ಮುಗಿಸಿದ್ದೇನೆ ಎಂಬುದನ್ನು ಹೇಳುತ್ತಿಲ್ಲ. ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನನಗೆ ಸಮಯದ ಅನುಕೂಲತೆ ಇದೆ ಎಂದಿದ್ದಾರೆ. ಇದರರ್ಥ ಧೋನಿ ಮುಂದಿನ ಸೀಸನ್ ಆಡುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಮುಂದಿನ ಸೀಸನ್​ವರೆಗೂ ಕಾಯಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ