ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ! ಮಾತಾಡಿದ್ರೆ ಪಟ್ಟ ಕೈ ತಪ್ಪುವ ಸಾಧ್ಯತೆ, ಅಜ್ಜಯ್ಯ ಭವಿಷ್ಯ

Updated on: May 28, 2026 | 6:06 PM

ಮುಖ್ಯಮಂತ್ರಿ ಸ್ಥಾನದ ಕಸರತ್ತು ನಡೆಯುತ್ತಿರುವಾಗ, ಡಿ.ಕೆ. ಶಿವಕುಮಾರ್‌ಗೆ ನೊಣವಿನಕೆರೆ ಅಜ್ಜಯ್ಯನಿಂದ ಗಂಭೀರ ಎಚ್ಚರಿಕೆ ಸಿಕ್ಕಿದೆ. ಸಾಡೇ ಸಾತಿ ಶನಿ ದೆಸೆಯು ಆರಂಭವಾಗಲಿರುವುದರಿಂದ, ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಯಾವುದೇ ಆತುರದ ಹೇಳಿಕೆ ನೀಡದಂತೆ ಶ್ರೀಗಳು ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಮಾತಾಡಿದರೆ ಸಿಎಂ ಪಟ್ಟ ಕೈತಪ್ಪುವ ಅಪಾಯವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ತುಮಕೂರು, ಮೇ.28: “ಮಾತು ಆಡಿದರೆ ಮುತ್ತು ಒಡೆದು ಹೋದಂತೆ! ಸದ್ಯಕ್ಕೆ ಯಾವುದೇ ಆತುರದ ಹೇಳಿಕೆ ನೀಡಬೇಡಿ, ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗಬಹುದು!” – ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಅವರ ಪರಮ ದೈವ, ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ (Nonavinakere Kadasiddeshwara Mutt) ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಇಂತಹದೊಂದು ಅತ್ಯಂತ ಗಂಭೀರ ಹಾಗೂ ನಿಗೂಢ ಎಚ್ಚರಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದರಿಂದ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಚರ್ಚೆಗಳು ಜೋರಾಗಿವೆ. ಆದರೆ, ಅಜ್ಜಯ್ಯನವರು “ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು (ಮುತ್ತು ಒಡೆದು ಹೋಗಲಿದೆ)” ಎಂದು ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ. ಶ್ರೀಗಳ ಈ ಆದೇಶದ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಹಾಗೂ ಅವರ ಆಪ್ತ ಬೆಂಬಲಿಗರು ಯಾವುದೇ ವಿಜಯೋತ್ಸವ ಆಚರಿಸದಂತೆ ಮತ್ತು ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಸೈಲೆಂಟ್ ಆಗಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದಲ್ಲೇ ‘ಸಾಡೇ ಸಾತಿ’ ಶನಿ ದೆಸೆ (Sade Sati) ಆರಂಭವಾಗಲಿದೆಯಂತೆ. ಗ್ರಹಗತಿಗಳ ಈ ಏರುಪೇರಿನ ಕಾಲದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು. ಇಲ್ಲದಿದ್ದರೆ ಸಿಎಂ ಕುರ್ಚಿ ಅತ್ಯಂತ ಹತ್ತಿರ ಬಂದರೂ ಕೊನೆಯ ಕ್ಷಣದಲ್ಲಿ ಕೈ ತಪ್ಪುವ (ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವ) ಗಂಡಾಂತರ ಎದುರಾಗಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.

ಈ ಮಹತ್ವದ ರಾಜಕೀಯ ಮತ್ತು ಆಧ್ಯಾತ್ಮಿಕ ಸಲಹೆಯನ್ನು ನೀಡಿದ ಬಳಿಕ ನೊಣವಿನಕೆರೆ ಶ್ರೀಗಳು ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ನೇರವಾಗಿ ಮಠದಿಂದ ಹೊರಟು ಹೋಗಿದ್ದಾರೆ. ಸದ್ಯ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಆಯ್ಕೆ ಕಸರತ್ತು ನಡೆಯುತ್ತಿರುವಾಗಲೇ ಅಜ್ಜಯ್ಯನವರ ಈ ನಡೆ ಇಡೀ ಕೈ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 28, 2026 05:28 PM
Follow Us