ದಾವಣಗೆರೆ: ಪುಷ್ಪಾ ಮಹಾಲಿಂಗಪ್ಪ ವಸತಿ ಶಾಲೆಯಿಂದ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆ
ದಾವಣಗೆರೆಯ ಪುಷ್ಪಾ ಮಹಾಲಿಂಗಪ್ಪ ವಸತಿ ಶಾಲೆಯಿಂದ 14 ವರ್ಷದ ದಿಗಂತ್ ನಾಪತ್ತೆಯಾಗಿದ್ದಾನೆ. ಚನ್ನಗಿರಿ ಮೂಲದ ಈ ಒಂಬತ್ತನೇ ತರಗತಿ ವಿದ್ಯಾರ್ಥಿಯ ಪೋಷಕರು ಶಾಲೆಯ ಗೇಟ್ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಇದೇ ಶಾಲೆಯಲ್ಲಿ ಈ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ದಿಗಂತ್‌ಗೆ ಚುಡಾಯಿಸುತ್ತಿದ್ದರಿಂದ ಆತ ಹಾಸ್ಟೆಲ್ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ದಾವಣಗೆರೆ, ಅಕ್ಟೋಬರ್ 2: ದಾವಣಗೆರೆ ನಗರದ ಪುಷ್ಪಾ ಮಹಾಲಿಂಗಪ್ಪ ವಸತಿ ಶಾಲೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಚನ್ನಗಿರಿ ಮೂಲದ 14 ವರ್ಷದ ದಿಗಂತ್ ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದು, ಈತ ಶಾಲೆಯ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ. ಕಳೆದ ರಾತ್ರಿ ಶಾಲೆಯ ಸಿಬ್ಬಂದಿಗಳು ದಿಗಂತ್‌ನ ಪೋಷಕರಿಗೆ ಕರೆ ಮಾಡಿ, ಆತ ಶಾಲೆಯಿಂದ ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆಯ ಗೇಟ್ ಮುಂದೆ ಬಂದು ಕಣ್ಣೀರು ಹಾಕಿದ್ದಾರೆ.
ವರದಿಗಳ ಪ್ರಕಾರ, ಈ ಹಿಂದೆಯೂ ಇದೇ ಪುಷ್ಪಾ ಮಹಾಲಿಂಗಪ್ಪ ಶಾಲೆಯಿಂದ ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿದೆ. ಇದು ಶಾಲೆಯಲ್ಲಿ ನಡೆದ ಎರಡನೇ ಇಂತಹ ಘಟನೆಯಾಗಿದೆ. ದಿಗಂತ್‌ಗೆ ಕೆಲವರು ಚುಡಾಯಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಿದ್ದು, ಇದೇ ಕಾರಣಕ್ಕೆ ಆತ ಹಾಸ್ಟೆಲ್ ಬಿಟ್ಟು ಹೋಗಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
