ಡಿಕೆ ಶಿವಕುಮಾರ್ ​ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ

|

Updated on: Sep 02, 2024 | 7:50 AM

1970, 80ರ ದಶಕದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಅವರು ಓಡಿಸುತ್ತಿದ್ದ ಯೆಜ್‌ಡಿ ರೋಡ್‌ಕಿಂಗ್ ಬೈಕ್​ಗೆ ಹೊಸ ರೂಪ ಬಂದಿದೆ. 30 ವರ್ಷಗಳಿಂದ ದೂಳು ಹಿಡಿದು ಮೂಲೆ ಸೇರಿದ್ದ ಬೈಕ್​ ಯುವ ಮೆಕ್ಯಾನಿಕ್​ ಸುಪ್ರೀತ್ ಮರು ಜೀವ ನೀಡಿದ್ದಾರೆ.

ಯೆಜ್‌ಡಿ ರೋಡ್‌ಕಿಂಗ್ ಬೈಕ್ 1970, 80ರ ದಶಕದಲ್ಲಿ ಯಂಗ್‌ಸ್ಟರ್‌ಗಳಲ್ಲಿ ಕ್ರೇಜ್ ಸೃಷ್ಟಿಸಿದ್ದ ಗಾಡಿ. ರಸ್ತೆಯಲ್ಲಿ ಹೋಗುತ್ತಿದ್ದರೇ ತಿರುಗಿ ನೋಡುವವರು ಅದೆಷ್ಟೊ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಅವರು 30-35 ವರ್ಷಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಹೆಚ್​​​ಆರ್‌ಸಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಬೈಕ್ ಕ್ರೇಜ್ ಇತ್ತು. ಆಗ ಅವರು ಈ ಯೆಜ್‌ಡಿ ಬೈಕ್ ಓಡಿಸುತ್ತಿದ್ದರು. ಯೂತ್‌ ಕಾಂಗ್ರೆಸ್‌ನಲ್ಲಿದ್ದಾಗಲೂ ಈ ಬೈಕ್‌ನಲ್ಲಿ ಓಡಾಡುತ್ತಿದ್ದರು. ಇದು ಡಿಕೆ ಶಿವಕುಮಾರ್​ ಅವರ ಲಕ್ಕಿ ಬೈಕ್. ಹೀಗಾಗಿ ಈ ಬೈಕ್​ನ್ನು ಮಾರಾಟ ಮಾಡದೆ ಹಾಗೇ ಇಟ್ಟುಕೊಂಡಿದ್ದರು.

30 ವರ್ಷದಿಂದ ಧೂಳು ಹಿಡಿದಿದ್ದ ಈ ಬೈಕನ್ನು ಬೆಂಗಳೂರಿನ ಹಳೆ ಬೈಕ್‌ಗಳ ಪ್ರೇಮಿ ಸುಪ್ರೀತ್ ಎಂಬವರು ರಿಪೇರಿ ಮಾಡಿ ಅದನ್ನು ಡಿಕೆ ಶಿವಕುಮಾರ್​ ಅವರಿಗೆ ಒಪ್ಪಿಸಿದ್ದಾರೆ. 70-80 ದಶಕದ ಬೈಕ್ ಆದ ಕಾರಣ ಅದರ ಬಿಡಿ ಭಾಗಗಳು ಸಿಗುವುದು ಕಷ್ಟವಾಯ್ತು. ಹೀಗಾಗಿ ಕೆಲ ಭಾಗಗಳನ್ನು ಬೇರೆ ಬೇರೆ ರಾಜ್ಯ ಮತ್ತು ಇಂಜಿನ್‌ ಪಾರ್ಟ್ಸ್​​ಗಳನ್ನು ವಿದೇಶದಿಂದ ತರಿಸಿಕೊಂಡೆ. ಸತತ 10 ತಿಂಗಳ ಪರಿಶ್ರಮದಿಂದ 2 ಲಕ್ಷ ರೂ. ಖರ್ಚು ಮಾಡಿ ಡಿಕೆ ಶಿವಕುಮಾರ್ ಅವರ ಪ್ರೀತಿಯ ಬೈಕ್‌ಗೆ ಮರುಜೀವ ನೀಡಿದ್ದೇನೆ ಎಂದು ಸುಪ್ರೀತ್​​ ಹೇಳಿದರು.

ತಮ್ಮ ಹಳೆ ಬೈಕ್‌ನ ಹೊಸ ರೂಪ ನೋಡಿ ಥ್ರಿಲ್ ಆದ ಡಿಕೆ ಶಿವಕುಮಾರ್​ ಅವರು, ತಾವೇ ಸ್ಟಾರ್ಟ್ ಮಾಡಿ ಖುಷಿಪಟ್ಟರು. ನನ್ನ ಮೊದಲ ಬೈಕ್ ಇದು, ಸಾವಿರಾರು ನೆನಪುಗಳು ಬೆಸೆದುಕೊಂಡಿವೆ ಇದರೊಂದಿಗೆ ಅಂತ ಹೇಳಿದರು. ಬೈಕ್​ಗೆ ಮರು ಜೀವ ನೀಡಿದ ಮೆಕ್ಯಾನಿಕ್ ಸುಪ್ರೀತ್‌ ಅವರ ಕೆಲಸವನ್ನು ಡಿಕೆ ಶಿವಕುಮಾರ್​ ಶ್ಲಾಘಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Sep 02, 2024 07:49 AM