ಗೃಹ ಇಲಾಖೆಗೆ ಇಲ್ಲದ ಮಾಹಿತಿ ಒಬ್ಬ ಎಂಎಲ್​ಸಿಗೆ ಇದೆಯೆಂದರೆ ಅದು ಇಂಟಲಿಜೆನ್ಸ್ ವೈಫಲ್ಯ: ಬಸವರಾಜ ಬೊಮ್ಮಾಯಿ

|

Updated on: Jan 04, 2024 | 5:44 PM

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ಪದೇಪದೆ ನಡೆಯುತ್ತಿವೆ, ಗೂಂಡಾ ಮತ್ತು ರೌಡಿಶೀಟರ್ ಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು: ಬಹಳ ದಿನಗಳ ಬಳಿಕ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡುವಾಗ, ಕೋಮು ಪ್ರಚೋದನೆ ಮತ್ತು ಇಡೀ ರಾಜ್ಯವೇ ಬೆಚ್ಚಿಬೀಳುವಂಥ ಹೇಳಿಕೆಯನ್ನು ವಿಧಾನ ಪರಿಷತ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ನೀಡಿದ್ದರೂ ಗೃಹಸಚಿವ ಜಿ ಪರಮೇಶ್ವರ್ (G Parameshwara) ಅವರು ತಮ್ಮ ಪಕ್ಷದ ಹಿರಿಯ ನಾಯಕನ ಬಗ್ಗೆ ಮೃದು ಧೋರಣೆ ತಳೆದಿರುವುದು ಮತ್ತು ಯಾವುದೇ ಕ್ರಮ ಕೈಗೊಳ್ಳದಿರುವುದು ದಿಗ್ಭ್ರಮೆ ಮೂಡಿಸುತ್ತದೆ ಎಂದು ಹೇಳಿದರು. ಗೃಹ ಇಲಾಖೆಗೆ ಗೊತ್ತಿರದ ಮಾಹಿತಿ ಒಬ್ಬ ಎಂಎಲ್ ಸಿ ಗೆ ಇದೆ ಅಂದರೆ ಅದು ಗುಪ್ತಚರ ಇಲಾಖೆ ಮತ್ತು ಸರ್ಕಾರ ವೈಫಲ್ಯವಲ್ಲದೆ ಮತ್ತೇನೂ ಅಲ್ಲ ಅಂತ ಬೊಮ್ಮಾಯಿ ಹೇಳಿದರು. ಗೃಹ ಸಚಿವರು ಹರಿಪ್ರಸಾದ್ ಹೇಳಿಕೆಯನ್ನು ಬಹಳ ಹಗುರವಾಗಿ ಪರಿಗಣಿಸಿದಂತಿದೆ, ಇದೇ ಹೇಳಿಕೆಕಯನ್ನು ಬೇರೆ ಯಾರಾದರೂ ನೀಡಿದ್ದರೆ ಪೊಲೀಸ್ ಠಾಣೆಗೆ ಎಳೆದೊಯ್ದು ವಿಚಾರಣೆ ನಡೆಸುತ್ತಿದ್ದರು ಎಂದು ಅವರು ಹೇಳಿದರು. ಪೊಲೀಸರು ವಿಚಾರಣೆ ನಡೆಸಿದರೆ ಎಲ್ಲ ಮಾಹಿತಿ ನೀಡುವುದಾಗಿ ಖುದ್ದು ಹರಿಪ್ರಸಾದ್ ಹೇಳಿರುವಾಗ, ಗೃಹ ಇಲಾಖೆ ಮೀನಮೇಷ ಎಣಿಸುತ್ತಿರುವುದು ಯಾಕೆ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on