ಹಾಲು ಮಾರುವ ಕೆಲಸ ಕೊಟ್ಟದ್ದಾರೆ, ಮತ್ತೆ ಚುನಾವಣೆಗೆ ನಿಲ್ತೀನೋ ಇಲ್ವೋ ಗೊತ್ತಿಲ್ಲ: ಡಿ.ಕೆ.ಸುರೇಶ್

Edited By:

Updated on: Mar 04, 2026 | 4:05 PM

ಮಾಗಡಿಯ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ 'ಮುಂದೆ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ' ಎಂದು ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 115 ಕಿ.ಮೀ. ದೂರದಿಂದ ಕಾವೇರಿ ನೀರು ತಂದು ಮಾಗಡಿಯ 18 ಕೆರೆಗಳಿಗೆ ತುಂಬಿಸುವ ಈ ಮಹತ್ವದ ಯೋಜನೆಯ ಕುರಿತು ಮಾತನಾಡುತ್ತಾ, ಕೆಲಸ ಮಾಡಿ ತೋರಿಸುತ್ತೇವೆಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ರಾಮನಗರ, ಮಾ.4: ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಆಡಿದ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. “ಮುಂದೆ ಮತ್ತೆ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ.”ಮುಂದೆ ನಾನು ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಸದ್ಯಕ್ಕೆ ನನ್ನನ್ನು ಬಮೂಲ್ (BAMUL) ಅಧ್ಯಕ್ಷನನ್ನಾಗಿ ಮಾಡಿದ್ದಾರೆ, ಹಾಲು ಮಾರುವ ಕೆಲಸ ಕೊಟ್ಟಿದ್ದಾರೆ, ಅದನ್ನು ಮಾಡುತ್ತಿದ್ದೇನೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 115 ಕಿ.ಮೀ ದೂರದಿಂದ ನೀರು ತಂದು ಮಾಗಡಿಯ 18 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ನಾವು ಕೊಟ್ಟ ಮಾತಿನಂತೆ ಅದನ್ನು ಮಾಡಿ ತೋರಿಸುತ್ತಿದ್ದೇವೆ ಎಂದರು. ಬೆಂಗಳೂರು ದಕ್ಷಿಣ ಜಿಲ್ಲೆಯ ನೀರಿನ ಅಭಾವ ನೀಗಿಸಲು ಡಿ.ಕೆ. ಶಿವಕುಮಾರ್ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸತ್ತೇಗಾಲ ನೀರಾವರಿ ಯೋಜನೆ ಕೂಡ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.”ನಾವು ಸುಳ್ಳು ಹೇಳಿ, ಕಣ್ಣೀರು ಹಾಕಿಕೊಂಡು ಜನರ ಬಳಿ ಹೋಗುವುದಿಲ್ಲ. ಬದಲಾಗಿ ಕೆಲಸ ಮಾಡಿ ತೋರಿಸುತ್ತೇವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರು” ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published on: Mar 04, 2026 04:05 PM
Follow Us
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More