ಹರಿಪ್ರಸಾದ್ ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಗೃಹ ಇಲಾಖೆಯಲ್ಲಿ ಅಂಥ ಮಾಹಿತಿ ಇಲ್ಲ: ಜಿ ಪರಮೇಶ್ವರ್, ಗೃಹ ಸಚಿವ
ಮಾಧ್ಯಮದವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಗೃಹ ಸಚಿವ ಗೊತ್ತಿಲ್ಲ ಗೊತ್ತಿಲ್ಲ ಅಂತಲೇ ಉತ್ತರಿಸಿದರು. ಅದು ನಿಜವೇ ಬಿಡಿ. ಯಾಕೆಂದರೆ, ಬೆಳಗ್ಗೆ ಆ ವಿವಾದಾತ್ಮಕ ಹೇಳಿಕೆ ನೀಡುವಾಗ ಬಿಕೆ ಹರಿಪ್ರಸಾದ್ ಇದು ಕೇವಲ ತನ್ನ ವೈಯಕ್ತಿಕ ಅನಿಸಿಕೆ, ರಾಜ್ಯ ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷಕ್ಕೆ ತಾನಾಡಿದ ಮಾತು ಯಾವ ರೀತಿಯಿಂದಲೂ ಸಂಬಂಧಪಟ್ಟಿಲ್ಲ ಎಂದಿದ್ದರು.
ಕೋಲಾರ: ಕೋಲಾರ ಜಿಲ್ಲೆ ಪ್ರವಾಸಕ್ಕೆ ಆಗಮಿಸಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಅವರನ್ನು ಕಾರ್ಯಕರ್ತರು ಮತ್ತು ಬೆಂಬಲಿಗರು ಭಾರೀ ಗಾತ್ರದ ಸೇಬಿನ ಹಾರದೊಂದಿಗೆ ಸ್ವಾಗತ ಕೋರಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಬಿಕೆ ಹರಿಪ್ರಸಾದ್ (BK Hariprasad) ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಸರ್ಕಾರದ ಸ್ಪಷ್ಟನೆ ನೀಡಿದರು. ಹರಿಪ್ರಸಾದ್ ಯಾವ ಮಾಹಿತಿ ಅಥವಾ ಮೂಲವನ್ನು ಆಧರಿಸಿ ಗೋಧ್ರಾ ಹತ್ಯಾಕಾಂಡದಂಥ ಘಟನೆ ಮರುಕಳಿಸುವ ಬಗ್ಗೆ ಮಾತಾಡಿದ್ದಾರೋ ಗೊತ್ತಿಲ್ಲ, ಆದರೆ ಅ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ (home department) ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪರಮೇಶ್ವರ್ ಹೇಳಿದರು. ಹರಿಪ್ರಸಾದ್ ನೀಡಿರುವ ಹೇಳಿಕೆ ಅವರ ವೈಯಕ್ತಿಕವಾದದ್ದು ಅಂತ ಖುದ್ದು ಅವರೇ ಹೇಳಿದ್ದಾರೆಂದು ಮಾಧ್ಯಮದವರು ಗೃಹ ಸಚಿವರ ಗಮನಕ್ಕೆ ತಂದಾಗ, ಇನ್ನು ತನ್ನನ್ನು ಕೇಳುವುದೇನಿದೆ ಎಂದು ಪರಮೇಶ್ವರ್ ಹೇಳಿದರು. ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭ ಒಂದು ಧಾರ್ಮಿಕ ಕಾರ್ಯಕ್ರಮವೇ ಹೊರತು ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ, ಆದರೆ ಬಿಜೆಪಿ ಅದನ್ನು ಸಂಪೂರ್ಣವಾಗಿ ರಾಜಕೀಕರಣಗೊಳಿಸಿದೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ