VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
DPL 2025: ಈ ಪಂದ್ಯದಲ್ಲಿ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ನೀಡಿದ 186 ರನ್ಗಳ ಗುರಿಯನ್ನು ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ಪರ ಅಂಕಿತ್ ಕುಮಾರ್ 46 ಎಸೆತಗಳಲ್ಲಿ 6 ಸಿಕ್ಸ್ಗಳೊಂದಿಗೆ 96 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 15.4 ಓವರ್ಗಳಲ್ಲಿ 189 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ಸಂಚಲನ ಸೃಷ್ಟಿಸಿದ್ದ ದಿಗ್ವೇಶ್ ರಾಥಿಯ ಮುಂಗೋಪ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲೂ ಮುಂದುವರೆದಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಈ ಲೀಗ್ನ 7ನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಅದು ಕೂಡ ಎಡಗೈ ದಾಂಡಿಗ ಅಂಕಿತ್ ಕುಮಾರ್ ಹಾಗೂ ದಿಗ್ವೇಶ್ ರಾಥಿ ನಡುವೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ಪರ ಅಂಕಿತ್ ಕುಮಾರ್ ಹಾಗೂ ಕ್ರಿಶ್ ಯಾದವ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ಪವರ್ಪ್ಲೇನಲ್ಲೇ ಪವರ್ ತೋರಿಸಿದ್ದರು. ಇದರ ನಡುವೆ 5ನೇ ಓವರ್ ಎಸೆಯಲು ಬಂದ ದಿಗ್ವೇಶ್ ರಾಥಿ ಅರ್ಧದಲ್ಲೇ ಬೌಲಿಂಗ್ ನಿಲ್ಲಿಸಿ ಅಂಕಿತ್ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ. ಆ ಬಳಿಕ ಮತ್ತೆ ಚೆಂಡೆಸೆಯಲು ಬಂದಾಗ ಅಂಕಿತ್ ಕ್ರೀಸ್ನಿಂದ ಹೊರ ನಡೆಯುವ ಮೂಲಕ ಪ್ರತ್ಯುತ್ತರ ನೀಡಿದರು.
ಇದೇ ವೇಳೆ ಕೋಪಗೊಂಡ ದಿಗ್ವೇಶ್ ರಾಥಿ ಅಶ್ಲೀಲವಾಗಿ ಬೈದು ಹಿಂತಿರುಗಿ ನಡೆದಿದ್ದರು. ಇದಾದ ಬಳಿಕ 16ನೇ ಓವರ್ನಲ್ಲಿ ಅಂಕಿತ್ ಹಾಗೂ ದಿಗ್ವೇಶ್ ರಾಥಿ ಮತ್ತೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸ್ ಸಿಡಿಸುವ ಮೂಲಕ ಅಂಕಿತ್ ಕುಮಾರ್, ದಿಗ್ವೇಶ್ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ನೀಡಿದ 186 ರನ್ಗಳ ಗುರಿಯನ್ನು ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ಪರ ಅಂಕಿತ್ ಕುಮಾರ್ 46 ಎಸೆತಗಳಲ್ಲಿ 6 ಸಿಕ್ಸ್ಗಳೊಂದಿಗೆ 96 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 15.4 ಓವರ್ಗಳಲ್ಲಿ 189 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.