ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಗೆದ್ದ ಕಝಾಕಿಸ್ತಾನದ ಎಲೆನಾ ರೈಬಾಕಿನಾ

Updated on: Jan 31, 2026 | 6:14 PM

Rybakina Crowned Australian Open Champion: ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ, ಎಲೆನಾ ರೈಬಾಕಿನಾ ವಿಶ್ವದ ನಂ. 1 ಅರಿನಾ ಸಬಲೆಂಕಾ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಇದು ರೈಬಾಕಿನಾ ಅವರ ಮೊದಲ ಆಸ್ಟ್ರೇಲಿಯನ್ ಓಪನ್ ಹಾಗೂ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಕಝಾಕಿಸ್ತಾನದ ಆಟಗಾರ್ತಿಯಾಗಿ ಈ ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕಝಾಕಿಸ್ತಾನ್‌ನ ಎಲೆನಾ ರೈಬಾಕಿನಾ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು ಸೋಲಿಸಿ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿದರು. ಆದರೆ ರೈಬಾಕಿನಾ ಅದ್ಭುತ ಪುನರಾಗಮನ ಮಾಡಿ ಪ್ರಶಸ್ತಿ ಗೆದ್ದರು.

ಈ ಪಂದ್ಯದಲ್ಲಿ ಎಲೆನಾ ರೈಬಾಕಿನಾ, ಅರಿನಾ ಸಬಲೆಂಕಾ ಅವರನ್ನು 6-4, 4-6, 6-4 ಸೆಟ್‌ಗಳಿಂದ ಸೋಲಿಸಿದರು. ರೈಬಾಕಿನಾ ಮೊದಲ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದುಕೊಂಡರೆ, ಸಬಲೆಂಕಾ ಎರಡನೇ ಸೆಟ್‌ ಅನ್ನು 6-4 ಅಂತರದಿಂದ ಗೆದ್ದುಕೊಂಡರು. ಮೂರನೇ ಸೆಟ್‌ನಲ್ಲಿ, ಸಬಲೆಂಕಾ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದರಾದರೂ ರೈಬಾಕಿನಾ ಅಂತಿಮವಾಗಿ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಎಲೆನಾ ರೈಬಾಕಿನಾಗೆ ಇದು ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಸಬಲೆಂಕಾ ಈ ಬಾರಿ ಮೂರನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ವಿಫಲರಾದರು.

ಇದರೊಂದಿಗೆ, ಎಲೆನಾ ರೈಬಾಕಿನಾ ಆಸ್ಟ್ರೇಲಿಯನ್ ಓಪನ್ ಗೆದ್ದ ಕಝಾಕಿಸ್ತಾನ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಐತಿಹಾಸಿಕ ಗೆಲುವಿಗೆ ಪ್ರತಿಯಾಗಿ ಅವರಿಗೆ 25 ಕೋಟಿ ರೂ. ಬಹುಮಾನದ ಹಣವು ಸಿಕ್ಕಿದೆ. ಇದಕ್ಕೂ ಮೊದಲು, ಅವರು 2022 ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಕಝಾಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 31, 2026 06:12 PM