ಉಗ್ರರ ಗುಂಡಿಗೆ ಬಲಿಯಾದ ವೀರಯೋಧ ಕನ್ನಡಿಗ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅಂತಿಮ ಸಂಸ್ಕಾರ ಶುಕ್ರವಾರ ಬೆಳಗ್ಗೆ ಬೆಂಗಳೂರಲ್ಲಿ

|

Updated on: Nov 23, 2023 | 6:43 PM

ರಜೌರಿಯಲ್ಲಿ ನಡೆದ ಎನ್ ಕೌಂಟರ್ ನಮ್ಮ ಪ್ರಾಂಜಲ್ ಸೇರಿದಂತೆ ಒಟ್ಟು ಐವರು ಭಾರತೀಯರು ವೀರಮರಣವನ್ನಪ್ಪಿದ್ದಾರೆ. ರಜೌರಿ ಹತ್ತಿರವಿರುವ ಅರಣ್ಯ ಪ್ರದೇಶವೊಂದರಲ್ಲಿ ಗುಂಡಿನ ಕಾಳಗ ನಡೆದಿದ್ದು ಇಬ್ಬರು ಉಗ್ರರನ್ನು ಭಾರತೀಯ ಜವಾನರು ಹೊಡೆದುರುಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಾಂಜಲ್ ಸಾವಿಗೆ ಶೋಕವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕನ್ನಡನಾಡಿನ ಮತ್ತೊಬ್ಬ ವೀರಯೋಧ ಹುತಾತ್ಮರಾಗಿದ್ದಾರೆ (martyred). ಜಮ್ಮುವಿನ ರಜೌರಿಯಲ್ಲಿ ನಿನ್ನೆ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬೆಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ (Captain MV Patajal) ಬಲಿಯಾಗಿದ್ದಾರೆ. ಕುಟಂಬದ ಮೂಲಗಳ ಪ್ರಕಾರ ಪ್ರಾಂಜಲ್ ಪಾರ್ಥೀವ ಶರೀರ ಇಂದು ಸಾಯಂಕಾಲ ಬೆಂಗಳೂರಿನ ಹೊರವಲಯದಲ್ಲಿರುವ ಜಿಗಣಿ ಬಳಿಯ ನಂದನವನ ಬಡಾವಣೆಯಲ್ಲಿರುವ (Nandanavana Layout) ಹುತಾತ್ಮನ ನಿವಾಸಕ್ಕೆ ಆಗಮಿಸಲಿದೆ. ಪ್ರಾಂಜಲ್ ಅವರನ್ನು ಚಿಕ್ಕಂದಿನಿಂದ ನೋಡಿರುವ ಪಕ್ಕದ ಮನೆಯ ಸುದರ್ಶನ್ ಅವರು ಟಿವಿ9 ಕನ್ನಡ ವಾಹಿನಿಯ ವರರದಿಗಾರನೊಂದಿಗೆ ಮಾತಾಡಿದ್ದು ಪ್ರಾಂಜಲ್ ಗೆ ಬಾಲ್ಯದಿಂದಲೇ ಸೇನೆ ಸೇರುವ ಉತ್ಕಟ ಆಸೆ ಇತ್ತಂತೆ, ಹಾಗಾಗೇ ಇಂಜಿನೀಯರಿಂಗ್ ಸೀಟು ಸಿಕ್ಕಿದ್ದರೂ ನ್ಯಾಶನಲ್ ಡಿಫೆನ್ಸ್ ಆಕಾಡೆಮಿ ಸೇರಿದ್ದರಂತೆ. ಮನೆ ಮುಂದೆಯೇ ಗಾರ್ಡ್ ಆಫ್ ಆನರ್ ಗಾಗಿ ವ್ಯವಸ್ಥೆ ಮಾಡಲಾಗಿದ್ದು ನಾಳೆ ಬೆಳಗ್ಗೆ ಹತ್ತಿರದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸುದರ್ಶನ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ