ಕ್ಷಣಾರ್ಧದಲ್ಲಿ ಧರೆಗುರುಳಿದ ಬೆಟ್ಟದ ಮಣ್ಣು: ಕೇರಳದಲ್ಲಿ ದಿಢೀರ್ ಪ್ರವಾಹ-ಭೂಕುಸಿತದ ಅಟ್ಟಹಾಸ, ಐವರು ಜಲಸಮಾಧಿ
ಕೇರಳದ ಹಲವೆಡೆ ಮುಂಗಾರು ಮತ್ತೆ ಚುರುಕುಗೊಂಡಿದ್ದು, ದಿಢೀರ್ ಪ್ರವಾಹ ಹಾಗೂ ಪ್ರತ್ಯೇಕ ಭೂಕುಸಿತಗಳಿಂದಾಗಿ ಭಾನುವಾರ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಮಲಪ್ಪುರಂನ ಕೊಟ್ಟಪುಳ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಐವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಇತ್ತ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ಅಮಾಯಕರ ಪ್ರಾಣ ತೆಗೆದಿವೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜ್ಯ ಸರ್ಕಾರವು ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ನೇರ ಎಸ್‌ಎಂಎಸ್ (SMS) ಮುನ್ಸೂಚನೆ ರವಾನಿಸಿದ್ದು, ವಿಪತ್ತು ನಿರ್ವಹಣಾ ಪಡೆಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ.
ತಿರುವನಂತಪುರಂ, ಸೆಪ್ಟೆಂಬರ್ 21: ಕೇರಳದ ಹಲವೆಡೆ ಮುಂಗಾರು ಮತ್ತೆ ಚುರುಕುಗೊಂಡಿದ್ದು, ದಿಢೀರ್ ಪ್ರವಾಹ ಹಾಗೂ ಪ್ರತ್ಯೇಕ ಭೂಕುಸಿತಗಳಿಂದಾಗಿ ಭಾನುವಾರ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಮಲಪ್ಪುರಂನ ಕೊಟ್ಟಪುಳ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಐವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಇತ್ತ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ಅಮಾಯಕರ ಪ್ರಾಣ ತೆಗೆದಿವೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜ್ಯ ಸರ್ಕಾರವು ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ನೇರ ಎಸ್‌ಎಂಎಸ್ (SMS) ಮುನ್ಸೂಚನೆ ರವಾನಿಸಿದ್ದು, ವಿಪತ್ತು ನಿರ್ವಹಣಾ ಪಡೆಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ.
ಮಲಪ್ಪುರಂ ಜಿಲ್ಲೆಯ ನಿಲಂಬೂರ್-ಅಮರಂಬಲಂ ವ್ಯಾಪ್ತಿಯ ಕೊಟ್ಟಪುಳ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದ ವಂದೂರ್ ಮೂಲದ ಐವರ ಗುಂಪು ದಿಢೀರ್ ನೀರಿನ ಮಟ್ಟ ಏರಿಕೆಯಾಗಿ ಕೊಚ್ಚಿಹೋಗಿದೆ. ಸ್ಥಳೀಯರು ಒಬ್ಬನನ್ನು ರಕ್ಷಿಸಿದ್ದು, ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.
ವಾಗಮೋನ್ ಗಿರಿಧಾಮದ ಪ್ರವಾಸ ಮುಗಿಸಿ ಸ್ಕೂಟರ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಟೀಕೋಯ್ ಸಮೀಪದ ವೆಲತುಸ್ಸೇರಿಯಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಗೆ ಜಾರಿದ ಭಾರೀ ಮಣ್ಣಿನಡಿ ಸಿಲುಕಿ ತಮಿಳುನಾಡಿನ ಚೆನ್ನೈ ಮೂಲದ ಸಂಗೀತ ಅರುಲ್ ಲಾಲ್ (35) ಮೃತಪಟ್ಟಿದ್ದು, ಅವರ ಸ್ನೇಹಿತೆ ಗಾಯಗೊಂಡಿದ್ದಾರೆ.
ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರಿನಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿಯ ತಾತ್ಕಾಲಿಕ ಶೆಡ್‌ನಲ್ಲಿ ಆಶ್ರಯ ಪಡೆದಿದ್ದ ಮೂವರ ಮೇಲೆ ಬೆಟ್ಟದ ಇಳಿಜಾರು ಕುಸಿದು ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಘ್ನೇಶ್ವರಿ ಐಎಎಸ್ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಿಎಂ ಕಚೇರಿ ಆದೇಶಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ